ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ: ಶಾಸಕ ಕೆ.ಷಡಕ್ಷರಿ

| Published : Nov 15 2024, 12:36 AM IST

ಸಾರಾಂಶ

ಮಾನವೀಯ ಮೌಲ್ಯಗಳನ್ನು ಸಾರುವ ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಬೇಕಾಗಿರುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಇನ್ನರ್‌ವೀಲ್ ಕ್ಲಬ್ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ತಿಪಟೂರಿನಲ್ಲಿ ಜಾನಪದ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಭಾರತೀಯ ಸಂಸ್ಕೃತಿಯಲ್ಲಿ ಜನಪದ ಕಲೆಗೆ ತನ್ನದೆ ಆದ ಮಹತ್ವವಿದ್ದು, ಮಾನವೀಯ ಮೌಲ್ಯಗಳನ್ನು ಸಾರುವ ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಬೇಕಾಗಿರುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಇನ್ನರ್‌ವೀಲ್ ಕ್ಲಬ್ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಗುರುವಾರ ತಿಪಟೂರು ಇನ್ನರ್‌ವೀಲ್ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾನಪದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯದ ತವರೂರಾದ ಕಲ್ಪತರು ನಾಡು ತಿಪಟೂರು ಅನೇಕ ಜನ ಹೆಸರಾಂತ ಕಲಾವಿದರಿಗೆ ಜನ್ಮನೀಡಿದೆ. ಜಾನಪದ ಕಲೆಗಳಾದ ಸೋಬಾನೆ ಪದ, ಕೋಲಾಟ, ಬಯಲಾಟ, ವೀರಭದ್ರನ ಕುಣಿತ, ಸೋಮನ ಕುಣಿತ ಸೇರಿದಂತೆ ಅನೇಕ ಕಲೆಗಳು ಜೀವಂತವಾಗಿರಬೇಕಾದರೆ ಮಕ್ಕಳಲ್ಲಿ ಈ ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರ, ಇನ್ನೂ ಜೀವಂತವಾಗಿದೆ ಎಂದರೆ ಅದು ನಮ್ಮ ನಾಡಿನ ಹೆಣ್ಣು ಮಕ್ಕಳಿಂದ. ಆಧುನಿಕ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆಗಳು ನಶಿಸಿ ಹೋಗುತ್ತಿದ್ದು ನಮ್ಮ ಪೂರ್ವಿಕರ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ಪರಂಪರೆಗಳು, ಶಿಸ್ತುಬದ್ದ ಮೌಲ್ಯಗಳು ಮತ್ತು ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವಪೀಳಿಗೆಯ ಪಾತ್ರ ಅತ್ಯಮೂಲ್ಯವಾದದ್ದು ಎಂದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಟಿ.ಎಸ್. ಸುಮಿತ್ರಾ ಕ್ಲಬ್‌ನ ಎಡಿಟರ್ ರೇಖಾ ಅನೂಪ್, ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್, ಕದಳಿ ವೇದಿಕೆ ಅಧ್ಯಕ್ಷ ಸ್ವರ್ಣಗೌರಿ, ತೀರ್ಪುಗಾರರಾದ ಶಂಕರಪ್ಪ, ಮಂಜುನಾಥ್, ನಾಗರಾಜು, ಕ್ಲಬ್ ಮಾಜಿ ಅಧ್ಯಕ್ಷೆ ಭಾಗ್ಯಮೂರ್ತಿ, ಉಪಾಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಸುಜಾತ, ಐಎಸ್‌ಓ ಕಾತ್ಯಾಯಿನಿ, ರಮಾ, ಪ್ರಭಾವಿಶ್ವನಾಥ್, ಶೋಭಾಜಯದೇವ್, ಆರ್ಥಿಕ ಸಾಕ್ಷರತ ಕೇಂದ್ರದ ಸಮಾಲೋಚಕಿ ಪಿ. ರೇಖಾ, ಪುಷ್ಪಾಮೂರ್ತಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಯಕ್ಷಗಾನ, ಕಂಸಾಳೆ, ಜನಪದ ಹಾಡು, ಸೋಬಾನೆ ಪದ, ವೀರಗಾಸೆ, ಜಾನಪದ ನೃತ್ಯ ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.