ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು: ಶಾಸಕ ಜಿ.ಎಚ್.ಶ್ರೀನಿವಾಸ್

| Published : Sep 01 2025, 01:03 AM IST

ಸಾರಾಂಶ

ತರೀಕೆರೆ, ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಸ್ವಾಸ್ಥ್ಯ ಸಮಾಜದ ಬುನಾದಿಗೆ ಜಾನಪದ ಕಲೆ, ಸಾಹಿತ್ಯದ ಕೊಡುಗೆ ಅಪಾರ. ಮಾನವನ ಸರ್ವತೋಮುಖ ಬೆಳವಣಿಗೆ, ಪರಿಸರ ಸಂರಕ್ಷಣೆ, ಕೌಟುಂಬಿಕ ಹೊಂದಾಣಿಕೆಗೆ ಜಾನಪದ ಸಹಕಾರಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಪ್ರತಿಪಾದಿಸಿದರು.

- ಬೆಟ್ಟತಾವರೆಕೆರೆಯಲ್ಲಿ ತರೀಕೆರೆ ತಾಲೂಕು ತೃತೀಯ ಜಾನಪದ ಸಮ್ಮೇಳನ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಸ್ವಾಸ್ಥ್ಯ ಸಮಾಜದ ಬುನಾದಿಗೆ ಜಾನಪದ ಕಲೆ, ಸಾಹಿತ್ಯದ ಕೊಡುಗೆ ಅಪಾರ. ಮಾನವನ ಸರ್ವತೋಮುಖ ಬೆಳವಣಿಗೆ, ಪರಿಸರ ಸಂರಕ್ಷಣೆ, ಕೌಟುಂಬಿಕ ಹೊಂದಾಣಿಕೆಗೆ ಜಾನಪದ ಸಹಕಾರಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಪ್ರತಿಪಾದಿಸಿದರು.ಭಾನುವಾರ ಕರ್ನಾಟಕ ಜಾನಪದ ಪರಿಷತ್ತು, ತರೀಕೆರೆ ತಾಲೂಕು ಘಟಕದಿಂದ ಸಮಾಜದ ಬೆಟ್ಟ ತಾವರೆಕೆರೆ ಶ್ರೀ ಗೌರಮ್ಮದೇವಿ ಸಮುದಾಯ ಭವನದಲ್ಲಿ ನಡೆದ ತರೀಕೆರೆ ತಾಲೂಕು ತೃತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ನಾಡಿದಾದ್ಯಂತ ಜಾನಪದ ಕಲೆಯನ್ನು ಉಳಿಸಿ, ಬೆಳೆಸಲು ಅವಿರತ ವಾಗಿ ಶ್ರಮಿಸುತ್ತಿರುವ ಕರ್ನಾಟಕ ಜಾನಪದ ಪರಿಷತ್ತು ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ಇಂದಿನ ಮಕ್ಕಳಿಗೆ ಹಿರಿಯರಾದ ನಾವು ಜನಪದ ಕಲೆ, ಸಾಹಿತ್ಯ, ಸಂಗೀತ ಇತ್ಯಾದಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಸಮಾಜದ ಸ್ವಾಸ್ತ್ಯ ಕಾಪಾಡಲು ಜನಪದ ಸಂಸ್ಕೃತಿ, ಕಲೆ, ಸಾಹಿತ್ಯದ ಅಗತ್ಯತೆ ಇದೆ. ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿವಾಗಿ ಅಭಿವೃದ್ಧಿ ಸಾಧಿಸಲು ಜನಪದ ಸಹಕಾರಿ ಎಂದು ಹೇಳಿದರು.ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಕಳೆದ 8 ವರ್ಷಗಳಿಂದ ಜಾನಪದ ಪರಿಷತ್ತು ತಾಲೂಕು, ಹೋಬಳಿ ಮಟ್ಟದಲ್ಲಿ ಜಾನಪದ ತರಬೇತಿ ಶಿಬಿರ, ಜಾನಪದ ಗೋಷ್ಠಿ, ಸಮ್ಮೇಳನ ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಜಾನಪದ ಕಲಾ ಶಿಬಿರ ಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.ಯಾವುದೇ ಸಾರ್ವಜನಿಕ ಅಥವಾ ಖಾಸಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದಾಗ ಜಾನಪದ ಕಲೆ, ಸಾಹಿತ್ಯ, ಸಂಗೀತ ಇತ್ಯಾದಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಮನವಿ ಮಾಡಿದರು.ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಇಂದಿನ ಯುವಕ, ಯುವತಿಯರಿಗೆ ಕುಟುಂಬದ ಹಿರಿಯರು ಜಾನಪದ ಕಲೆ, ಒಗಟು, ಗಾದೆ, ಜಾನಪದ ನೃತ್ಯ, ಸಾಹಿತ್ಯ, ಸಂಗೀತದ ಬಗ್ಗೆ ಹೇಳಿಕೊಡಬೇಕು. ಈ ನಾಡಿನ ಕಲೆ, ಸಾಹಿತ್ಯ, ಸಂಗೀತ ಉಳಿಸುವ ನಿಟ್ಟಿನಲ್ಲಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಸಾಧಿಸಲು ಜಾನಪದದ ಕೊಡುಗೆ ದೊಡ್ಡದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜಾನಪದ ಕಲೆಗೆ ಒತ್ತು ನೀಡುವ ಕೆಲಸವಾಗಬೇಕು ಎಂದು ಅಭಿಪ್ರಾಯ ಪಟ್ಟರು.ಗ್ಲೋಬಲ್ ಸೋಷಿಯಲ್ ಅಂಡ್ ವೆಲ್‌ಫೇರ್ ಫೌಂಡೇಷನ್ ರಾಜ್ಯಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜಾನಪದ ಸಾಹಿತ್ಯ, ಕ್ರಾಂತಿ ಗೀತೆಗಳು ಜನರಲ್ಲಿ ಐಕ್ಯತೆ ಮೂಡಿಸಲು, ಚಳುವಳಿಗೆ ಶಕ್ತಿ ತುಂಬಲು ಸಹಕಾರಿಯಾದವು ಎಂದು ತಿಳಿಸಿದರು.

ಸಾಹಿತಿ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಜಾನಪದ ಸಂಸ್ಕೃತಿಯಲ್ಲಿ ನಮ್ಮ ಜಾನಪದರು ತ್ಯಾಗ, ದಾನ-ಧರ್ಮ, ಪರೋಪಕಾರ ಜಾತ್ಯಾತೀತ ಮನೋಭಾವನೆ ಮುಂತಾದ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವುದನ್ನು ತಿಳಿದುಕೊಂಡಿದ್ದೇವೆ. ಯುವಕ ಯುವತಿಯರು ಹೆಚ್ಚು ಜನಪದ ಸಾಹಿತ್ಯ ಓದಿ ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ವೀರಗಾಸೆ, ಕೋಲಾಟ, ಸೋಮನ ಕುಣಿತ, ಸುಗ್ಗಿ ಕುಣಿತ, ಜಾನಪದ ನೃತ್ಯ, ಚಿಟ್ಟಿಮೇಳ, ಭಜನೆ ಸೇರಿದಂತೆ ಹಲವು ಕಲಾ ತಂಡಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಜಾನಪದ ಗೋಷ್ಠಿ ನಡೆಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಚ್.ಎಸ್.ರಾಜಶೇಖರ್, ಜಾನಪದ ಪ್ರಶಸ್ತಿ ಪುರಸ್ಕೃತ ಡಾ.ಮಾಳೇನಹಳ್ಳಿ ಬಸಪ್ಪ, ಗ್ರಾಪಂ ಅಧ್ಯಕ್ಷೆ ಜಯಮ್ಮ, ಸಾಹಿತಿ ಹೊಸೂರು ಪುಟ್ಟರಾಜು, ಕೆ.ಎಸ್.ಶಿವಣ್ಣ, ಡಿ.ಪಿ.ರಾಜಪ್ಪ, ಪರಿಷತ್ತಿನ ಪದಾಧಿಕಾರಿ ಜಿ.ಎಸ್.ತಿಪ್ಪೇಶ್, ಪಿ.ದೇವರಾಜ್, ಆರ್.ನಾಗೇಶ್, ಗಾಯತ್ರಮ್ಮ, ಟಿ.ಈ.ದೇವರಾಜ್, ಗ್ರಾಮಸ್ಥರಾದ ತಿಪ್ಪೇರುದ್ರಪ್ಪ, ಕಲ್ಲೇಶಪ್ಪ, ಗೌರೀಶ, ಮರುಳಸಿದ್ದಪ್ಪ ಹಾಜರಿದ್ದರು-

31ಕೆಟಿಆರ್.ಕೆ.9ಃ ತರೀಕೆರೆ ಸಮೀಪದ ಬೆಟ್ಟತಾವರೆಕೆರೆಯಲ್ಲಿ ನಡೆದ ತರೀಕೆರೆ ತಾಲೂಕು ತೃತೀಯ ಜಾನಪದ ಸಮ್ಮೇಳನವನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ಉದ್ಘಾಟಿಸಿದರು. ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಜಾನಪದ ಸಮ್ಮೇಳನಾಧ್ಯಕ್ಷ ಬಿ.ವಿ.ಜಯಣ್ಣ, ತಾಲೂಕು ಅಧ್ಯಕ್ಷ ಎಚ್.ಎಸ್.ರಾಜಶೇಖರ್, ಸಾಹಿತಿ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಮತ್ತಿತರರು ಇದ್ದಾರೆ.

-- ಕೋಟ್‌--

ಸಮ್ಮೇಳನಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿರುವುದು ಮುಂದಿನ ದಿನಗಳಲ್ಲಿ ಜಾನಪದ ಕಲೆಗೆ ಮತ್ತಷ್ಟು ಶ್ರಮಿಸುವ ಸ್ಪೂರ್ತಿ ನೀಡಿದಂತಾಗಿದೆ. ಗ್ರಾಮದಲ್ಲಿ ಹಬ್ಬ, ಹರಿದಿನಗಳಲ್ಲಿ ಆಯೋಜಿಸುತ್ತಿದ್ದ ನಾಟಕ ಗಳಲ್ಲಿ ಅಭಿನಯಿಸಿದ್ದೇನೆ. ನನ್ನಲ್ಲಿರುವ ಜಾನಪದ ಕಲೆಗೆ ನನ್ನ ಕುಟುಂಬದ ಬೆಂಬಲದಿಂದ ಹೆಚ್ಚು ಪ್ರೋತ್ಸಾಹ ದೊರಕಿದೆ.

ಬಿ.ವಿ.ಜಯಣ್ಣ, ಸಮ್ಮೇಳನಾಧ್ಯಕ್ಷ