ಸಾರಾಂಶ
ತರೀಕೆರೆ, ಜಾನಪದ ಸಾಹಿತ್ಯ, ಸಂಗೀತಕ್ಕೆ, ಮಾನವನನ್ನು ನಾಗರಿಕನನ್ನಾಗಿ ಮಾಡುವ ಶಕ್ತಿ ಇದೆ ಎಂದು ತರೀಕೆರೆ ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನಾಧ್ಯಕ್ಷ ಬಿ.ವಿ.ಜಯಣ್ಣ ಹೇಳಿದ್ದಾರೆ.
- ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಅಹ್ವಾನ
ಕನ್ನಡಪ್ರಭ ವಾರ್ತೆ, ತರೀಕೆರೆಜಾನಪದ ಸಾಹಿತ್ಯ, ಸಂಗೀತಕ್ಕೆ, ಮಾನವನನ್ನು ನಾಗರಿಕನನ್ನಾಗಿ ಮಾಡುವ ಶಕ್ತಿ ಇದೆ ಎಂದು ತರೀಕೆರೆ ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನಾಧ್ಯಕ್ಷ ಬಿ.ವಿ.ಜಯಣ್ಣ ಹೇಳಿದ್ದಾರೆ.
ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ತಿನಿಂದ ಬೆಟ್ಟತಾವರೆ ಕೆರೆಯಲ್ಲಿ ಆ.31 ರಂದು ನಡೆಯಲಿರುವ ತಾಲೂಕು ಮಟ್ಟದ ತೃತಿಯ ಜಾನಪದ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಪಟ್ಟಣದ ಜನಪದ ಕಲಾ ಪೋಷಕ ಬಿ.ವಿ.ಜಯಣ್ಣ ಅವರ ಸ್ವಗೃಹಕ್ಕೆ ಪರಿಷತ್ತು ಪದಾಧಿಕಾರಿಗಳು ತೆರಳಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಾನಪದ ಸಾಹಿತ್ಯ, ಸಂಗೀತ ಕಲೆ, ಸಂಸ್ಕೃತಿ ಇವೆಲ್ಲವೂ ಜೀವಂತವಾಗಿ ಮುಂದಿನ ಪೀಳಿಗೆಗೆ ವರ್ಗಾ ವಣೆಯಾಗಬೇಕಾದರೆ ಇಂದಿನ ಯುವಜನರ ಪಾತ್ರ ಪ್ರಮುಖವಾಗಿದೆ. ಜಾನಪದ ಸಾಹಿತ್ಯ, ಸಂಗೀತಕ್ಕೆ, ಮಾನವನನ್ನು ನಾಗರಿಕನನ್ನಾಗಿ ಮಾಡಿ, ಸುಸಂಸ್ಕೃತ ವ್ಯಕ್ತಿತ್ವ ರೂಪಿಸುವ ಶಕ್ತಿ ಜಾನಪದ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಇದೆ. ಹಾಗಾಗಿ ಇಂದಿನ ಯುವಕ ಯುವತಿಯರು ವಿದ್ಯಾರ್ಥಿಗಳು, ಜಾನಪದ ವಿದ್ವಾಂಸರು, ಸಾಹಿತಿಗಳ, ಸಾಹಿತ್ಯ, ಹಾಡು ಗಳನ್ನು, ಕಲಿತು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿ ನನ್ನನ್ನು ಗುರುತಿಸಿದ್ದಕ್ಕಾಗಿ ಕರ್ನಾಟಕ ಜಾನಪದ ಪರಿಷತ್ತಿಗೆ ಅಭಿನಂದಿಸುತ್ತೇನೆ. ಇದು ನನ್ನ 40 ವರ್ಷದ ಜಾನಪದ ಕಲಾ ಮತ್ತು ಸಮಾಜ ಸೇವೆಗೆ ಸಂದ ಗೌರವ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿಸಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದೆ ಎಂದು ತಿಳಿಸಿದರು. ರಾಜ್ಯ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಮಾತನಾಡಿ, ಸಮ್ಮೇಳನ ಯಶಸ್ವಿ ಯಾಗಿ ನಡೆಸಲು ಅನೇಕ ಸಮಿತಿ ರಚಿಸಲಾಗಿದೆ. ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಸಮ್ಮೇಳನ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಸಾಹಿತಿ ಚಟ್ನಹಳ್ಳಿ ಮಹೇಶ್, ಹೊಸೂರು ಪುಟ್ಟರಾಜು, ಪ್ರೊ. ಸಿದ್ದಯ್ಯ ಪಟೇಲ್, ಪುರಸಭಾ ಸದಸ್ಯ ಹಳಿಯೂರು ಕುಮಾರ್, ಸಾಹಿತಿಗಳಾದ ಇಮ್ರಾನ್ ಅಹಮದ್, ನವೀನ್, ಹಾಡುಗಾರರಾದ ಭಕ್ತನ್ಕಟ್ಟೆ ಲೋಕೇಶ್, ಪಂಚನಹಳ್ಳಿ ಲೋಕೇಶ್ ಮುಂತಾದ ಕಲಾವಿದರು ಭಾಗವಹಿಸುವರು. 20 ಜನಪದ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು, ಹಿರಿಯ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸ್ವಾಸ್ಥ ಸಮಾಜ ನಿರ್ಮಾಣದ ಶಕ್ತಿ ಜಾನಪದಕ್ಕಿದೆ. ಶಿಷ್ಟ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಎಲ್ಲಾ ಸಾಹಿತ್ಯಗಳ ಮೂಲ ಜಾನಪದ. ಭಾರತೀಯ ಸಂಸ್ಕೃತಿ, ಕಲೆ, ಆಹಾರ ಪದ್ಧತಿ, ಸಾಹಿತ್ಯ, ಸಂಗೀತ, ಆಚಾರ ವಿಚಾರ,ಉಡುಗೆ, ತೊಡುಗೆ, ಕೃಷಿ,ಜೀವನ ಶೈಲಿ, ಸಾಮಾಜಿಕ ಮತ್ತು ಆರ್ಥಿಕ, ವೈಜ್ಞಾನಿಕ ನೆಲೆಗಟ್ಟಿನ ಮೂಲಭೇರು ಸಹ ಜಾನಪದವೇ ಆಗಿದೆ ಎಂದರು. ಕಜಾಪ ತರಿಕೆರೆ ತಾಲೂಕು ಅಧ್ಯಕ್ಷ ರಾಜಶೇಖರ್ ಮಾತನಾಡಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಮತ್ತು ಖಾಸಗಿ ವೇದಿಕೆಗಳಲ್ಲಿ ಜಾನಪದ ಕಲೆ ಸಾಹಿತ್ಯ ಸಂಗೀತಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಬೆಟ್ಟ ತಾವರೆಕೆರೆಯಲ್ಲಿ 3ನೇ ಜಾನಪದ ಸಮ್ಮೇಳನ ವಿಜೃಂಭಣೆ ಯಿಂದ ನಡೆಯುತ್ತಿದ್ದು ಜಿಲ್ಲೆಯ ಎಲ್ಲಾ ಕಲಾವಿದರು ಆಗಮಿಸಿ ಸಮ್ಮೇಳನ ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು ವಿನಂತಿಸಿದರು. ಪ್ರಮುಖವಾಗಿ ತಾಲೂಕಿನ ವೀರಗಾಸೆ, ಡೊಳ್ಳು ಕುಣಿತ, ನಂದಿ ಕುಣಿತ, ಕೋಲಾಟ, ಗಾರಡಿ ಬೊಂಬೆ ಕೀಲು ಕುದುರೆ ಮುಂತಾದ ಕಲಾತಂಡಗಳ ಮೆರವಣಿಗೆಯೊಂದಿಗೆ ಸಮ್ಮೇಳನ ಅಧ್ಯಕ್ಷರನ್ನು ವೇದಿಕೆಗೆ ಕರೆ ತರಲಾಗುವುದು ಎಂದು ತಿಳಿಸಿದರು, ಪರಿಷತ್ತಿನ ಗೌರವಾಧ್ಯಕ್ಷ ಆರ್. ನಾಗೇಶ್ ಮಾತನಾಡಿ ತಾಲೂಕಿನ ವಿವಿಧ ಕಲಾ ತಂಡಗಳು ತಮ್ಮ ಅಮೋಘ ಪ್ರತಿಭೆ ಪ್ರದರ್ಶಿಸಲು ಇದು ಬಹುದೊಡ್ಡ ವೇದಿಕೆಯಾಗಲಿದೆ. ಸಮ್ಮೇಳನ ಯಶಸ್ಸಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಜಾಪ ಉಪಾಧ್ಯಕ್ಷ ಜಿ. ಎಸ್. ತಿಪ್ಪೇಶ್, ಶಂಕ್ರಪ್ಪ, ತ್ಯಾಗದಬಾಗಿ ದೇವರಾಜ್, ಡಾ.ಮಾಳೆನಹಳ್ಳಿ ಬಸಪ್ಪ ಗಿರೀಶ, ಬೆಟ್ಟತಾವರೆಕೆರೆ ಮರಳು ಸಿದ್ದಪ್ಪ, ಗ್ರಾಪಂ ಸದಸ್ಯ ಕಲ್ಲೇಶಪ್ಪ, ಶಿವಕುಮಾರ್, ಗೌರೀಶ್, ತಿಪ್ಪೇಶಪ್ಪ, ನಂಜುಂಡಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.-30ಕೆಟಿಆರ್.ಕೆ.1ಃ
ತರೀಕೆರೆ ತಾಲೂಕು ಮಟ್ಟದ ತೃತಿಯ ಜಾನಪದ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಟ್ಟಣದ ಜನಪದ ಕಲಾಪೋಷಕ ಬಿ.ವಿ.ಜಯಣ್ಣ ಅವರ ಸ್ವಗೃಹಕ್ಕೆ ಪರಿಷತ್ತು ಪದಾಧಿಕಾರಿಗಳು ತೆರಳಿ ಅಧಿಕೃತ ವಾಗಿ ಆಹ್ವಾನಿಸಲಾಯಿತು. ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಮತ್ತಿತರರು ಇದ್ದರು.