ಜಾನಪದ ಸಾಹಿತ್ಯ ಈ ದೇಶದ ಆಸ್ತಿ: ಸುತ್ತೂರು ಶ್ರೀ

| Published : Mar 13 2025, 12:45 AM IST

ಜಾನಪದ ಸಾಹಿತ್ಯ ಈ ದೇಶದ ಆಸ್ತಿ: ಸುತ್ತೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದರು ಮತ್ತು ಜನಪದ ಸಾಹಿತ್ಯ ಈ ದೇಶದ ಆಸ್ತಿ, ಜನಪದರು ಪುಸ್ತಕವನ್ನು ನೋಡಿದವರಲ್ಲಾ. ತಮ್ಮ ಜೀವನದ ಘಟನೆಗಳನ್ನು ಹಾಡಾಗಿ ಹಾಡುವ ಮೂಲಕ ತಮ್ಮ ದುಃಖ ದುಮಾನಗಳನ್ನು ಹಾಡುಗಳ ಮೂಲಕ ಪರಿಚಯಿಸಿದ್ದಾರೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನುಡಿದರು.

ಗೊರುಚರ ‘ಹೊನ್ನ ಬಿತ್ತೇವು..’ 3ನೇ ಆವೃತ್ತಿ ಬಿಡುಗಡೆ । ವಿವಿಧ ಸಾಧಕರಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಾನಪದರು ಮತ್ತು ಜನಪದ ಸಾಹಿತ್ಯ ಈ ದೇಶದ ಆಸ್ತಿ, ಜನಪದರು ಪುಸ್ತಕವನ್ನು ನೋಡಿದವರಲ್ಲಾ. ತಮ್ಮ ಜೀವನದ ಘಟನೆಗಳನ್ನು ಹಾಡಾಗಿ ಹಾಡುವ ಮೂಲಕ ತಮ್ಮ ದುಃಖ ದುಮಾನಗಳನ್ನು ಹಾಡುಗಳ ಮೂಲಕ ಪರಿಚಯಿಸಿದ್ದಾರೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನುಡಿದರು.

ನಗರದಲ್ಲಿ ಸುದ್ದಿರಾಜು ಪ್ರಕಾಶನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುವೆಂಪು ಕಲಾಮಂದಿರಲ್ಲಿ ಆಯೋಜಿಸಿದ್ದ ಗೊ.ರು.ಚನ್ನಬಸಪ್ಪ ಅವರ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಸ್ಮರಣ ಗ್ರಂಥದ 3ನೇ ಆವೃತ್ತಿ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.

ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಗೊ.ರು.ಚನ್ನಬಸಪ್ಪ ವಿರಚಿತ ‘ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಕೃತಿ 60 ವರ್ಷಗಳ ನಂತರ ಮೂರನೇ ಆವೃತ್ತಿ ಬಿಡುಗಡೆ ಯಾಗುತ್ತಿರುವುದು ಆ ಕೃತಿಯ ಮೌಲ್ಯತೆಗೆ ಸಾಕ್ಷಿ ಎಂದು ಹೇಳಿದರು.

ಜಾನಪದ ಗೀತೆಗಳು, ತಾಯಿ ಮಕ್ಕಳ ಸಂಬಂಧ ಸೇರಿದಂತೆ ಹಲವು ಮನುಷ್ಯ ಸಂಬಂಧಿತ ಸಮಸ್ಯೆಗಳಿಗೆ ಈ ಕೃತಿಯಲ್ಲಿ ಪರಿಹಾರವಿದೆ. ಅದರೊಂದಿಗೆ ಜಾನಪದ ಸಾಹಿತ್ಯ ಸಂಗ್ರಹಣೆಗೆ ಇರುವ ತೊಡಕುಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕೃತಿಯ ಗ್ರಂಥಕರ್ತ ಗೊ.ರು.ಚನ್ನಬಸಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಆಧುನಿಕತೆ ಸೆಳೆತಕ್ಕೆ ಸಿಲುಕಿ ನಮ್ಮ ಹಳ್ಳಿಗಳ ಬದುಕು ಬದಲಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ, ಜಾನಪದ ಅಕಾಡೆಮಿ ಆರಂಭಗೊಳ್ಳಲು ಕೃತಿ ಪ್ರೇರಣಾ ಶಕ್ತಿ. ತಾವು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೀಡಿದ ಮನವಿಯನ್ನು ಪುರಸ್ಕರಿಸಿ ಅಂದಿನ ಸರ್ಕಾರ ಹಾವೇರಿಯ ಶಿಗ್ಗಾವಿಯಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು. ಆದರೆ ನಂತರ ಬಂದ ಸರ್ಕಾರಗಳು ವಿಶ್ವವಿದ್ಯಾಲಯಕ್ಕೆ ಅಗತ್ಯ ನೆರವು ನೀಡದಿರುವುದು ವಿಷಾದನೀಯ ಎಂದು ಹೇಳಿದರು.

ಜಾನಪದ ವಿಶ್ವವಿದ್ಯಾಲಯ ಎಂಬುದು ಗ್ರಾಮೀಣ ಬುಡಕಟ್ಟು ಸಮುದಾಯಗಳ ಬದುಕಿಗೆ ನೇರ ಸಂಬಂಧ ಹೊಂದಿದೆ. ಪ್ರಯೋಗ, ಪ್ರಾತ್ಯಕ್ಷಿಕೆಗಳ ಮೂಲಕ ವಿಶ್ವವಿದ್ಯಾಲಯಗಳು ಕ್ರೀಯಾಶೀಲವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸರ್ಕಾರಗಳು ಜಾನಪದ ವಿಶ್ವವಿದ್ಯಾಲಯದ ವೈಶಿಷ್ಟ್ಯತೆಗಳನ್ನು ಪರಿಗಣಿಸಿ ಅದನ್ನು ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸಬೇಕು ಎಂದರು.

ಗೊರುಚ ಕುರಿತು ಜಾನಪದ ಸಾಹಿತಿ ಬಸವರಾಜು ನೆಲ್ಲೀಸರ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಾನಪದ ಕಲಾವಿದ ಜನಾರ್ಧನ, ಜನಪರ ಹೋರಾಟಗಾರರಾದ ರಾಧ ಸುಂದ್ರೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತೆ ಜಾಪನದ ಕಲಾವಿದೆ ಲಕ್ಷ್ಮೀ ದೇವಮ್ಮ, ಸಾಹಿತಿ ಮಧುಸೂದನ್, ಪತ್ರಕರ್ತರಾದ ಕಂ.ಕ.ಮೂರ್ತಿ, ಉದಯ್ ಕುಮಾರ್, ರೈತ ಹೋರಾಟಗಾರ ಕೆ.ಕೆ.ಕೃಷ್ಣೇಗೌಡ, ಕ್ರೀಡಾ ತರಬೇತಿದಾರ ಐ.ಫ್ರಾನ್ಸಿಸ್‌ರನ್ನು ಅಭಿನಂದಿಸಲಾಯಿತು.

ಸುದ್ದಿರಾಜು ಪ್ರಕಾಶನದ ಎನ್ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ರವೀಶ್ ಕ್ಯಾತನಬೀಡು ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ, ರೈತ ಮುಖಂಡ ಗುರುಶಾಂತಪ್ಪ, ಬಿ.ಎಂ.ಮಂಜುನಾಥಸ್ವಾಮಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಎಂ. ಲೋಕೇಶ್ ಹಾಜರಿದ್ದರು.