ಜಾನಪದ ಸಂಗೀತ ನೇಪಥ್ಯಕ್ಕೆ ಸರಿಯುತ್ತಿರುವುದು ಕಳವಳಕಾರಿ ಸಂಗತಿ: ರಾಜೇಶ್ವರಿ

| Published : Aug 05 2025, 11:47 PM IST

ಜಾನಪದ ಸಂಗೀತ ನೇಪಥ್ಯಕ್ಕೆ ಸರಿಯುತ್ತಿರುವುದು ಕಳವಳಕಾರಿ ಸಂಗತಿ: ರಾಜೇಶ್ವರಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಜೀವನಾಡಿಯಂತಿರುವ ದೇಸಿಯ ಕಲೆ ಹಾಗೂ ನಮ್ಮ ಸಂಸ್ಕೃತಿ ಬಿಂಬಿಸುವ ಮೂಲ ಜಾನಪದ ಸಂಗೀತ ಇತ್ತೀಚೆಗೆ ನೇಪಥ್ಯಕ್ಕೆ ಸರಿಯುತ್ತಿರುವುದು ಕಳವಳಕಾರಿ ಸಂಗತಿ

ಜಾನಪದ ಸಂಗೀತ ಕಲಿಕಾ ತರಬೇತಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಮ್ಮ ಜೀವನಾಡಿಯಂತಿರುವ ದೇಸಿಯ ಕಲೆ ಹಾಗೂ ನಮ್ಮ ಸಂಸ್ಕೃತಿ ಬಿಂಬಿಸುವ ಮೂಲ ಜಾನಪದ ಸಂಗೀತ ಇತ್ತೀಚೆಗೆ ನೇಪಥ್ಯಕ್ಕೆ ಸರಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ ಬಿ. ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಿಗೆ ಜಾನಪದ ಸಂಗೀತ ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂತಹ ತರಬೇತಿ ಕಾರ್ಯಕ್ರಮ ನೀಡಿ ಪ್ರೋತ್ಸಾಹಿಸುತ್ತಿದ್ದು, ಜಾನಪದ ಸಂಗೀತ ಕಾರ್ಯಕ್ರಮಗಳು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ನಶಿಸಿಹೋಗುತ್ತಿರುವ ಕಲೆಗಳನ್ನು ಮರುಕಳಿಸಲು ಈ ಕಲಿಕಾ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಯು 6 ತಿಂಗಳು ಕಾಲ ನಡೆಯಲಿದ್ದು, ವಾರಕ್ಕೆ ಮೂರು ದಿನದಂತೆ 2 ಗಂಟೆಗಳ ಅವಧಿ ತರಬೇತಿ ನೀಡಲಾಗುತ್ತದೆ. ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬಹುದು ಎಂದು ಕರೆ ನೀಡಿದರು.

ಚಿಗುರು ಕಲಾ ತಂಡದ ಜಾನಪದ ಗಾಯಕ ಹಾಗೂ ತರಬೇತುದಾರ ಎಸ್.ಎಂ. ಹುಲುಗಪ್ಪ ಮಾತನಾಡಿ, ಶಿಕ್ಷಣದಲ್ಲಿ ಸಂಗೀತ ಕಲಿಸಿದಂತೆ, ಜಾನಪದ ಕಲೆಯನ್ನು ಒಂದು ವಿಷಯವನ್ನಾಗಿ ಪ್ರಾಥಮಿಕ ಹಂತದಿಂದಲೇ ಬೋಧನೆ ಮಾಡಬೇಕು. ಮರೆಯಾಗುತ್ತಿರುವ ಜಾನಪದ ಕಲೆ ಮುಂದಿನ ಪೀಳಿಗೆಯವರಿಗೆ ಪರಿಚಯವಾಗಲಿದೆ. ಜಾನಪದ ಸಂಗೀತದ ಮೂಲಕ ಜಾನಪದ ಕಲೆಗಳನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ವಿದ್ಯಾವಂತರ ಪಾತ್ರ ಅಮೋಘವಾಗಿದೆ ಎಂದರು.ಬಳಿಕ ಚಿಗುರು ಕಲಾ ತಂಡದಿಂದ ವಿದ್ಯಾರ್ಥಿನಿಯರಿಗೆ ಜಾನಪದ ಸಂಗೀತ ಕಲಿಕಾ ತರಬೇತಿ ಶುರುಗೊಳಿಸಿದರು. ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಉಷಾ ಕುಮಾರಿ, ನಿಲಯ ಪಾಲಕಿ ಸ್ವಪ್ನ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.