ರಸಗೊಬ್ಬರ ಕೃತಕ ಅಭಾವ ಸೃಷ್ಟಿಗೆ ಕಡಿವಾಣ ಹಾಕಲು ಒತ್ತಾಯ

| Published : Aug 05 2025, 11:47 PM IST

ರಸಗೊಬ್ಬರ ಕೃತಕ ಅಭಾವ ಸೃಷ್ಟಿಗೆ ಕಡಿವಾಣ ಹಾಕಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕಂಪ್ಲಿ

ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಆಗ್ರಹಿಸಿದರು.

ಈ ಕುರಿತು ತಹಸೀಲ್ದಾರ್ ಜೂಗಲ ಮಂಜುನಾಥಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದರು.

ಈ ಹಿಂದೆ ತಾವುಗಳು ಕೃಷಿ ಪರಿಕರಗಳ ಮಾರಾಟಗಾರರ ಸಭೆ ನಡೆಸಿ ರಸ ಗೊಬ್ಬರದ ಅಭಾವ ಸೃಷ್ಟಿಸದೇ, ನಿಗದಿತ ದರದಲ್ಲಿ ಮಾರಾಟ ಮಾಡುವಂತೆ ಸೂಚನೆ ನೀಡಿದ್ದಿರಿ. ಅಲ್ಲದೇ ನಿಯಮ ಉಲ್ಲಂಘಿಸಿದಲ್ಲಿ ಅಂತಹ ಮಾರಾಟಗಾರರ ಪರವಾನಿಗೆ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಿರಿ. ಆದರೆ ತಮ್ಮ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ನೀಡದೇ ಕೆಲ ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರುತ್ತಿದ್ದು, ರೈತರಿಗೆ ರಸಗೊಬ್ಬರ ಬೇಕಾದಲ್ಲಿ ಪಹಣಿ, ಅಧಾರ್‌ಕಾರ್ಡ್ ಮತ್ತು ಸಹಿ ಮಾಡಿದ ಇ-ಸ್ಟ್ಯಾಂಪ್ ಖಾಲಿ ಬಾಂಡ್ ಪೇಪರ್ ನೀಡಬೇಕು. ಹಾಗಿದ್ದಲ್ಲಿ ರಸಗೊಬ್ಬರ ನೀಡಲಾಗುತ್ತದೆ ಎಂದು ಒತ್ತಡ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಎಮ್ಮಿಗನೂರು ಗ್ರಾಮದಲ್ಲಿ ರಸಗೊಬ್ಬರ ಎಂ.ಆರ್.ಪಿ ಬೆಲೆಗಿಂತ ಹೆಚ್ಚಿನ ದರಕ್ಕೆ ಬಿಲ್ ಸಮೇತ ಮಾರಾಟ ಮಾಡಿರುತ್ತಾರೆ. ಈ ವಿಷಯವಾಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳಿಗೆ ಆಧಾರ ಸಮೇತ ನೀಡಿದರೂ ನಮ್ಮನ್ನು ವಿತರಕರ ಅಂಗಡಿಗೆ ಬನ್ನಿ ಎಂದು ತಿಳಿಸಿರುತ್ತಾರೆ. ಎಲ್ಲಾ ಸರಿಯಾಗಿದೆ ಎಂದು ಹೇಳಿದ್ದು, ತದನಂತರದಲ್ಲಿ ನಮ್ಮ ಹತ್ತಿರ ಬಂದು ವಿತರಕರ ತಪ್ಪು ಏನು ಇಲ್ಲ ಎಂದು ನಮ್ಮ ಮನವೊಲಿಸಲು ಪ್ರಯತ್ನಿಸಿರುತ್ತಾರೆ. ಕಣ್ಣೆದುರಿಗೆ ಬಿಲ್ ಮತ್ತು ಚೀಲದ ಮೇಲೆನ ಎಂ.ಆರ್.ಪಿ ಬೆಲೆ ಇದ್ದರೂ ಸಹ ಅವರು ವಿತರಕರ ಪರವಾಗಿ ಮಾತನಾಡುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಈ ಕುರಿತು ಮೇಲಾಧಿಕಾರಿಗಳು ಗಮನ ಹರಿಸಿ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿರುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇನ್ನು ಎಲ್ಲಾ ರೈತರಿಗೆ ರಸಗೊಬ್ಬರಗಳು ಸರಿಯಾದ ರೀತಿಯಲ್ಲಿ ದೊರೆಯುವಂತೆ ಮಾಡಬೇಕು. ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಬೇಕು. ರಸಗೊಬ್ಬರಗಳ ಲಭ್ಯತೆ ಮತ್ತು ದರಗಳ ಪಟ್ಟಿಯನ್ನು ವಿತರಕರ ಅಂಗಡಿಯಲ್ಲಿ ಪ್ರದರ್ಶಿಸುವಂತೆ ಮಾಡಬೇಕು ಎಂದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿ.ವೀರೇಶ್, ಸಂಘದ ಪದಾಧಿಕಾರಿಗಳಾದ ತಿಮ್ಮಪ್ಪ ನಾಯಕ, ಕೊಟ್ಟೂರು ರಮೇಶ, ಚೆಲ್ಲಾ ವೆಂಕಟನಾಯ್ಡು, ಆದೋನಿ ರಂಗಪ್ಪ, ಕಾಗೆ ಈರಣ್ಣ, ಶ್ರೀಧರ, ಗಾದಿಲಿಂಗಪ್ಪ, ಮಳ್ಳೆ ಜಡೆಪ್ಪ, ಧರ್ಮಣ್ಣ, ಓ.ಎಂ. ಸುಮಂತಸ್ವಾಮಿ, ಕೆ.ಎಂ. ಅಡಿವೆಯ್ಯಸ್ವಾಮಿ, ಗುಡಿಸಲು ರಾಜಾಸಾಬ್, ಬುರೆಡ್ಡಿ ಬಸವರಾಜ ಇತರರಿದ್ದರು.