ರಾಷ್ಟ್ರಧ್ವಜ ಅಪಮಾನ ತಡೆಯಲು ಕಾನೂನು ಕ್ರಮ ಕೈಗೊಳ್ಳಿ

| Published : Aug 05 2025, 11:47 PM IST

ರಾಷ್ಟ್ರಧ್ವಜ ಅಪಮಾನ ತಡೆಯಲು ಕಾನೂನು ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ. ರಾಷ್ಟ್ರೀಯ ಧ್ವಜಗಳನ್ನು ಆ.೧೫ ಮತ್ತು ಜ. ೨೬ ರಂದು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ

ಶಿರಸಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರು, ಡಿವೈಎಸ್‌ಪಿ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ನೀಡಲಾಯಿತು.

ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ. ರಾಷ್ಟ್ರೀಯ ಧ್ವಜಗಳನ್ನು ಆ.೧೫ ಮತ್ತು ಜ. ೨೬ ರಂದು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗುವುದಿಲ್ಲ. ಆದ್ದರಿಂದ ಈ ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವ ಕಾಣಬೇಕಾಗಿದೆ. ರಾಷ್ಟ್ರಧ್ವಜದ ಈ ಅಗೌರವ ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಯಿತು. ಈ ಸಂಬಂಧ ವಿಚಾರಣೆ ವೇಳೆ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನ ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು.ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಯೂ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು. ಇದರೊಂದಿಗೆ ಕೇಂದ್ರ ಸರ್ಕಾರವೂ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿದೆ. ಅದರ ಪ್ರಕಾರ, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದು ಲಾಂಛನ ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ, ೧೯೫೦ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ ೧೯೭೧ ಉಲ್ಲಂಘನೆಯಾಗಿದೆ.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ತಯಾರಿಸಿ ಮಾರಾಟ ಮಾಡುತ್ತಿದ್ದರೆ ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ರಾಷ್ಟ್ರಧ್ವಜ ಗೌರವಿಸಿ ಎಂಬ ಉಪಕ್ರಮ ನಡೆಸಲು ಸೂಚನೆಗಳನ್ನು ನೀಡಬೇಕು ಎಂದು ವಿನಂತಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಬಿ.ಎನ್. ಸಂತೋಷ, ಮಹಾಂತೇಶ ಹಾದಿಮನಿ, ಭಾವನಾ ನೆತ್ರೇಕರ, ದಿಗಂಭರ ಭಟ್, ಶೇಷಗಿರಿ ರಾವ್, ಕೃಷ್ಣ ನಾಯಕ, ಮಹೇಂದ್ರ ಭಟ್, ದಿವಾಕರ ಭಟ್ ಮತ್ತಿತರರು ಇದ್ದರು.