ಸಾರಾಂಶ
ಸಿರಿಗೆರೆ: ಕಳೆದ 35 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಭಜನಾ ಮೇಳಕ್ಕೆ ಹೊಸ ರೂಪ ಕೊಟ್ಟು ಇನ್ನು ಮುಂದೆ ಜಾನಪದ ಗೀತೆಗಳ ಮೇಳವನ್ನು ಆಯೋಜಿಸಲಾಗುವುದು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಕಾಶಿ ಮಹಲಿಂಗಸ್ವಾಮಿಗಳವರ ಶ್ರದ್ಧಾಂಜಲಿ ಅಂಗವಾಗಿ ಏರ್ಪಡಿಸಿದ್ದ ಭಜನಾ ಮೇಳದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಜನೆ ಜಾನಪದ ಕಲೆಗಳ ಒಂದು ಪ್ರಕಾರ. ಜಾನಪದ ಅಡಿಯಲ್ಲಿ ಬರುವ ತತ್ವಪದ, ಗೀಗೀ ಪದ, ಲಾವಣಿ ಮುಂತಾದವುಗಳನ್ನು ಸೇರಿಸಿ ಮುಂದಿನ ವರ್ಷದಿಂದ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.ಭಕ್ತ ದೇವರ ಮುಂದೆ ತನ್ನ ಕಷ್ಟ ಕಾರ್ಪಣ್ಯಗಳನ್ನು ನಿವೇದಿಸಿಕೊಳ್ಳುವ ರೀತಿಯೇ ಭಜನೆ. ಭಜನೆಯಲ್ಲಿ ಮಾನವೀಯ ಮೌಲ್ಯಗಳೂ ಇವೆ. ಆದರೆ ಆಧುನಿಕ ಕಾಲದ ಭರಾಟೆಯಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಧಾರವಾಡದ ಜಾನಪದ ತಜ್ಞ ಡಾ.ಶ್ರೀಶೈಲ ಹುದ್ದಾರ ಮಾತನಾಡಿ, ಭಜನೆ ಭಾವೈಕ್ಯತೆಯನ್ನು ಕಟ್ಟುವ ಮಾರ್ಗವನ್ನು ಹೇಳಿಕೊಡುತ್ತದೆ. ವಚನ ಮತ್ತು ತತ್ವಪದಗಳನ್ನು ವ್ಯಾಪಕವಾಗಿ ಭಜನಾಕಾರರು ಪ್ರಚಾರ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದರು.ಭಜನೆಯಲ್ಲಿ ದೇಶೀಯ ಹಾಡುಗಳನ್ನು ಹಾಡುವ ಕೆಲಸ ಈ ಹಿಂದೆ ಇತ್ತು. ಅಂತಹ ಹಾಡುಗಳು ಇದೀಗ ಕಣ್ಮರೆಯಾಗುತ್ತಿವೆ ಎಂದು ಹೇಳಿದ ಅವರು, ಭಜನೆ ದುಡಿಯವ ಜನರ ಕಲೆ. ಅಂತಹ ಕಲೆಯನ್ನು ಗುರುತಿಸಿ ತರಳಬಾಳು ಜಗದ್ಗುರು ಮಠ ಅದನ್ನು ಬೆಳೆಸುವ ಕೆಲಸ ಮಾಡುತ್ತಿರುವುದು ಸಂತಸ ಎಂದರು.
ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಸಿದ್ದಪ್ಪ ಕಕ್ಕಳಮೇಲಿ ಮಾತನಾಡಿ, ಭಜನೆಗಳು ದೇವರನ್ನು ಆರಾಧಿಸುವ ಮಾರ್ಗವಾಗಿ ಜಾನಪದದಲ್ಲಿ ಬೆಳೆದವು. ಪೂಜೆ, ಆರಾಧನೆ, ಧ್ಯಾನ, ಯಜ್ಞ ಮುಂತಾದ ಸಂದರ್ಭದಲ್ಲಿ ಭಜನೆಗಳನ್ನು ದೇವರನ್ನು ಒಲಿಸಿಕೊಳ್ಳುವ ಕ್ರಮವಾಗಿ ಹಾಡಲಾಗುತ್ತಿತ್ತು ಎಂದರು.ಮೊಳಕಾಲ್ಮುರು ಕನ್ನಡ ಚಳುವಳಿಗಾರ ಮೊರಾರ್ಜಿ ಕನ್ನಡ ಗೀತೆಗಳನ್ನು ಹಾಡಿದರು. ಸುಮಾ ಸಣ್ಣಗೌಡರ ನಿರೂಪಿಸಿದರು. ಶಿಕ್ಷಕ ಎಸ್.ಜೆ.ಮಧು ಸ್ವಾಗತಿಸಿದರು. ಜ್ಯೋತಿಲಕ್ಷ್ಮಿ ವಂದಿಸಿದರು.
ಬಹುಮಾನಿತ ತಂಡಗಳು: ಕಿರಿಯರ ವಿಭಾಗ: ಕರಿಯಾಂಭಿಕಾ ಭಜನಾ ಮಂಡಳಿ, ಕ್ಯಾರಕಟ್ಟೆ, ಹರಪನಹಳ್ಳಿ (ಪ್ರಥಮ), ಉಚ್ಚಂಗಿ ಹಾಲಮ್ಮ ಭಜನಾ ಮಂಡಳಿ, ಚಿಕ್ಕೇನಹಳ್ಳಿ, (ದ್ವಿತೀಯ), ಗುರುಶಾಂತೇಶ್ವರ ಭಜನಾ ಮಂಡಳಿ, ಶಲವಡಿ, ಧಾರವಾಡ ಜಿಲ್ಲೆ (ತೃತೀಯ).ಹಿರಿಯರ ವಿಭಾಗ: ಶಿವರುದ್ರೇಶ್ವರ ಭಜನಾ ಮಂಡಳಿ, ಕುರುಬಗೊಂಡ (ಪ್ರಥಮ), ಮಲ್ಲಿಕಾರ್ಜುನ ಭಜನಾ ಮಂಡಳಿ, ಕುರುಬಗೊಂಡ, ಹಾವೇರಿ ಜಿಲ್ಲೆ (ದ್ವಿತೀಯ) ಯಳಗೋಡಿ ಆಂಜನೇಯಸ್ವಾಮಿ ಭಜನಾ ತಂಡ, ಉಚ್ಚಂಗಿದುರ್ಗ, ವಿಜಯನಗರ ಜಿಲ್ಲೆ (ತೃತೀಯ).