ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಇಂದು ಜನ ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಪ್ರಭಾವಿತರಾಗುತ್ತಿರುವ ಕಾರಣ, ನಮ್ಮ ನೆಲ ಮೂಲದ ಕಲೆಗಳು ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಶೇಷಾಧಿಕಾರಿ ಡಾ.ಗಂಗಾಧರ್ ಹೇಳಿದರು.ತುಮಕೂರು ತಾಲೂಕು ಹರಳೂರಿನ ಶ್ರೀವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಲೋಕಮಾನ್ಯ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಗೀತೆಗಳ ಗಾಯನ ಹಾಗೂ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎನ್ಎಸ್ಎಸ್ ಶಿಬಿರಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಳ್ಳಬೇಕು. ಆ ಮೂಲಕ ಸಾಂಸ್ಕೃತಿಕ ರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.ಮಕ್ಕಳ ಸಮಗ್ರ ವಿಕಾಸಕ್ಕೆ ಪಾಠ,ಪ್ರವಚನಗಳ ಜೊತೆಗೆ, ಕಲೆ, ಸಂಗೀತ, ಸಾಹಿತ್ಯ, ನೃತ್ಯ, ಲಲಿತ ಕಲೆಗಳು ಹೆಚ್ಚು ಉಪಯುಕ್ತ. ಹಾಗಾಗಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಇರುವ ಆಸಕ್ತಿಯನ್ನು ಶಿಕ್ಷಕರು ಗುರುತಿಸಿ, ಪ್ರೋತ್ಸಾಹಿಸಿದರೆ, ನಾಡಿಗೆ ಒಳ್ಳೆಯ ಗಾಯಕರು, ನೃತ್ಯಗಾರರು, ಸಂಗೀತಗಾರರು, ಸಂಗೀತ ಪರಿಕರಗಳನ್ನು ನುಡಿಸುವ ಕಲಾವಿದ ರನ್ನು ಹುಟ್ಟು ಹಾಕಲು ಸಾಧ್ಯ. ಸ್ವಾತಂತ್ರ ದಿನ, ಗಣರಾಜೋತ್ಸವದ ದಿನಗಳಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ನಡೆಯುವ ಫೇರೆಡ್‌ಗಳಲ್ಲಿ ಪಾಶ್ಚಾತ್ಯ ಸಂಗೀತ ನೃತ್ಯಕ್ಕಿಂತ, ಗ್ರಾಮೀಣ ಭಾಗದ ಜನಪದ ನೃತ್ಯ ಮತ್ತು ಸಂಗೀತಕ್ಕೆ ಪ್ರಾಧಾನ್ಯತೆ ಹೆಚ್ಚು. ಹಾಗಾಗಿ ವಿದ್ಯಾರ್ಥಿಗಳು ಜನಪದದಲ್ಲಿ ಆಸಕ್ತಿ ತೋರಿದಲ್ಲಿ ದೆಹಲಿಯಂತಹ ನಗರಗಳಲ್ಲಿ ಗಣ್ಯರ ಮುಂದೆ ತಮ್ಮ ಕಲೆ ಪ್ರದರ್ಶನಕ್ಕೆ ಅವಕಾಶ ದೊರೆಲಿದೆ ಎಂದರು.ಹಳ್ಳಿಗಾಡಿನ ಜನರು ತಮ್ಮ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ,ಕೃಷಿ ಉತ್ಪನ್ನಗಳ ಒಕ್ಕಣೆ ಮಾಡುವಾಗ, ರಾಗಿ ಬೀಸುವಾಗ, ಭತ್ತ ಕುಟ್ಟುವಾಗ ತಮ್ಮ ಆಯಾಸ ಮರೆಯಲು ಹಾಡುತ್ತಿದ್ದ ಹಾಡುಗಳು, ಒಂದು ಕಲಾ ಪ್ರಕಾರವಾಗಿ ಇಂದಿಗೂ ಜನ ಮನ್ನಣೆ ಪಡೆದಿವೆ. ಆದರೆ ಆಧುನಿಕ ಯಂತ್ರೋಪಕರಣಗಳ ಭರಾಟೆಯಲ್ಲಿ ಜನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಕಾಲದಲ್ಲಿ, ಕಾಲೇಜು ವಿದ್ಯಾರ್ಥಿಗಳು ಇಂತಹ ಶಿಬಿರಗಳ ಮೂಲಕ ಮರುಜನ್ಮ ನೀಡುತ್ತಿದ್ದು, ಅವರಿಗೆ ಪ್ರೋತ್ಸಾಹದಾಯಕವಾಗಿ ಲೋಕಮಾನ್ಯ ಸೇವಾ ಟ್ರಸ್ಟ್ ಸಹಕಾರಿಯಾಗಿ ನಿಂತಿರುವುದು ನಿಜಕ್ಕೂ ಸಂತೋಷದ ವಿಷಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಗುರುಮೂರ್ತಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹರಳೂರು ಗ್ರಾ.ಪಂ.ಸದಸ್ಯರಾದ ಮೇಘನಾ ಲೋಕೇಶ್, ಶಿವಪ್ರಸಾದ್, ವಿಜಯಕುಮಾರಿ, ಮಾಜಿ ಸದಸ್ಯರಾದ ಪುಟ್ಟರಾಜು, ಜಲದಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ರಾಜು, ಲೋಕಮಾನ್ಯ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಂತರ ರಾಜಣ್ಣ ಮತ್ತು ತಂಡದವರಿಂದ ಗೊರವನ ಕುಣಿತ, ಓಂಕಾರ್ ಮೇಲೋಡ್ಸ್ ವತಿಯಿಂದ ಜಾನಪದ ಗೀತೆ ಗಾಯನ ಮತ್ತು ನೃತ್ಯ, ಶಾಲಾ ಮಕ್ಕಳಿಗೆ ವಿವಿಧ ಜಾನಪದ ಗೀತೆಗಳ ಗಾಯನ ಮತ್ತು ನೃತ್ಯ,ಲಕ್ಷ್ಮಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.