ಸಾರಾಂಶ
ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ, ಜಾನಪದ ಸಂಭ್ರಮ-2024 ಜಾನಪದ ಹಾಡು,ನೃತ್ಯ, ಭರತನಾಟ್ಯ ಹಾಗೂ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮವನ್ನು ಇದೇ ನ.25 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಶರಣಪ್ಪ ಗೋನಾಳ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಮಾತೋಶ್ರೀಮಹಾಂತಮ್ಮ ಶಿವಬಸ್ಸಪ್ಪ ಗೋನಾಳ ಪ್ರತಿಷ್ಠಾನದಿಂದ ಪ್ರತಿಭಾ ಸುಗಮ ಸಂಗೀತ ಸಂಸ್ಥೆ 15ನೇ ವಾರ್ಷಿಕೋತ್ಸವದ ನಿಮಿತ್ತ ಮಹಾಂತಶ್ರೀ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ, ಜಾನಪದ ಸಂಭ್ರಮ-2024 ಜಾನಪದ ಹಾಡು,ನೃತ್ಯ, ಭರತನಾಟ್ಯ ಹಾಗೂ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮವನ್ನು ಇದೇ ನ.25 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಶರಣಪ್ಪ ಗೋನಾಳ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 :30 ಕ್ಕೆ ನಡೆಯಲಿರುವ ಸಮಾರಂಭದ ಸಾನಿಧ್ಯವನ್ನು ಇಲಕಲ್ ಚಿತ್ತರಗಿ ಸಂಸ್ಥಾನ ಮಠ ಗುರು ಮಹಾಂತಸ್ವಾಮಿಗಳ, ಚಿಕ್ಕಸುಗೂರಿನ ಕೋಡಂಗಲ್-ಚೌಕಿಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದು, ಸಚಿವ ಎನ್.ಎಸ್.ಬೋಸರಾಜು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಶಾಸಕ ಡಾ.ಶಿವರಾಜ ಪಾಟೀಲ್ ಅಧ್ಯಕ್ಷತೆಯನ್ನು ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು,ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು ಆಗಮಿಸಲಿದ್ದಾರೆ ಎಂದರು.
ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಗೋನಾಳ ಮಾತನಾಡಿ, ಸಮಾರಂಭದಲ್ಲಿ ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ಅವರಿಗೆ ವಿಜಯ ‘ಮಹಾಂತ ಅನುಗ್ರಹ’ ಪ್ರಶಸ್ತಿ, ಶರಣಯ್ಯ ನೂರಂದಯ್ಯ ಇಟಗಿ ಅವರಿಗೆ ‘ಮಹಾಂತ ಕಾಯಕಯೋಗಿ’, ಶಶಿಕಲಾ ಪರ್ವತಗೌಡ ಮಾಲಿ ಪಾಟೀಲ್ ಮದರಕಲ್ ಅವರಿಗೆ ‘ಗುರು ರಕ್ಷೆ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಗುತ್ತಿದೆ ಇದರ ಜೊತೆಗೆ ಆಯ್ದ ಮೂವರಿಗೆ ಆದರ್ಶ ದಂಪತಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಜನರಿಗೆ ಮಹಾಂತಶ್ರೀ ಪ್ರಶಸ್ತಿ, ಏಳು ಜನರಿಗೆ ‘ಮಹಾಂತ ಪುರಸ್ಕಾರ’ ಹಾಗೂ ತಲಾ ಒಬ್ಬರಿಗೆ ‘ಅತ್ಯುತ್ತಮ ಶಿಕ್ಷಣ ಸಂಸ್ಥೆ’ ಹಾಗೂ ‘ಸೇವಾ ಸಂಸ್ಥೆಯ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ವಿವರಿಸಿದರು.ಸಂಜೆ 6:30 ಕ್ಕೆ ನಡೆಯಲಿರುವ ಜಾನಪದ ಸಂಭ್ರಮದ ಕಾರ್ಯಕ್ರಮದ ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಮಾಜಿ ಶಾಸಕ ಎ.ಪಾಪಾರೆಡ್ಡಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಅಧ್ಯಕ್ಷತೆ ವಹಿಸಲಿದ್ದು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆ ಸದಸ್ಯರಾದ ಸಿದ್ದಯ್ಯಸ್ವಾಮಿ, ಇತರರು ಇದ್ದರು.