ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಘೋಷಣೆಯೊಂದಿಗೆ ಜಾನಪದ ಉತ್ಸವ ಅಂಗವಾಗಿ ಎತ್ತಿನ ಬಂಡಿ, ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.ಇಡೀ ಕಾಲೇಜಿನ ಆವರಣವನ್ನು ತಳಿರು ತೋರಣಗಳಿಂದ, ಬಣ್ಣ ಬಣ್ಣದ ರಂಗೋಲಿಗಳಿಂದ ಜಾನಪದ ಶೈಲಿಯಲ್ಲಿ ಸಿಂಗರಿಸಲಾಗಿತ್ತು. ಗಾಡಿ ಬಂಡಿ, ಒನಕೆ, ನೇಗಿಲು, ರಾಗಿಕಲ್ಲು, ಫಸಲು ರಾಶಿ, ಮೊರ ಮೊದಲಾದ ಜಾನಪದ ಪರಿಕರಗಳನ್ನು ಜೋಡಿಸಲಾಗಿತ್ತು. ಮಣ್ಣಿನ ಮಡಿಕೆಗಳ ಮೇಲೂ ವರ್ಲಿ ಕಲೆಯಿಂದ ಚಿತ್ತಾರ ಮೂಡಿಸಲಾಗಿತ್ತು. ಪ್ರಾಂಶುಪಾಲರಾದಿಯಾಗಿ ಎಲ್ಲಾ ಬೋಧಕರು, ಬೋಧಕೇತರು, ವಿದ್ಯಾರ್ಥಿಗಳು ಜಾನಪದ ಶೈಲಿಯಲ್ಲಿ ಪಂಚೆ, ಶರ್ಟು, ಟವೆಲ್, ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಶೈಲಿಯಲ್ಲಿ ಉಡುಗೆ ಧರಿಸಿದ್ದರು. ಜಾನಪದ ಸೆಲ್ಫಿ ಪಾಯಿಂಟ್ ಕೂಡ ಇತ್ತು.
ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ಕೋಲಾಟ, ವೀರಗಾಸೆ ಮೊದಲಾದ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಅವುಗಳ ಹಿಂದೆ ಎರಡು ಎತ್ತಿನ ಬಂಡಿಗಳಿದ್ದವು. ಒಂದು ಬಂಡಿಯಲ್ಲಿ ಜಾನಪದ ಉತ್ಸವವನ್ನು ಉದ್ಘಾಟಿಸಿದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಮುಖ್ಯ ಅತಿಥಿಗಳಾಗಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಚಂದ್ರಶೇಖರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲ ಡಾ.ಪುಟ್ಟರಾಜು, ಐಕ್ಯೂಐಸಿ ಸಂಚಾಲಕ ಡಾ.ಎಸ್.ವಿ.ಮುರಳೀಧರ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಆರ್. ಗುರುಸ್ವಾಮಿ, ಸಿಡಿಸಿ ಸದಸ್ಯ ಜಗದೀಶ್, ಪತ್ರಾಂಕಿತ ವ್ಯವಸ್ಥಾಪಕ ವಿದ್ಯಾರಣ್ಯ, ಡಾ.ಪಿ. ಬೆಟ್ಟೇಗೌಡ ಮೊದಲಾದವರು ಇದ್ದರು. ಮತ್ತೊಂದು ಬಂಡಿಯಲ್ಲಿ ಮಹಿಳಾ ಅಧ್ಯಾಪಕರು ಸಾಗಿದರು.ಕಾಲೇಜಿನಿಂದ ಹೊರಟ ಮೆರವಣಿಗೆಯು ವಿವೇಕಾನಂದ ನಗರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ, ಕಾಲೇಜಿಗೆ ವಾಪಸ್ ಆಯಿತು. ನಂತರ ಬುಗುರಿ, ಗೋಲಿ, ಕುಂಟೆ ಬಿಲ್ಲೆ, ಚೌಕಾಬಾರ, ಅಳುಗುಳಿ ಮಣೆ ಮೊದಲಾದ ದೇಸಿ ಕ್ರೀಡೆಗಳು, ಗಾದೆ ಸವಾಲ್, ಜನಪದ ಗೀತಗಾಯನ ನಡೆದವು, ಪಲ್ಲವಿ ಅವರ ನೇತೃತ್ವದಲ್ಲಿ ಜನಪದ ವಸ್ತು ಪ್ರದರ್ಶನ ನಡೆಯಿತು. ದೇಸಿ ಆಹಾರ ಮೇಳವೂ ಇತ್ತು. ಸಂಸ್ಕೃತಿಯ ಬಗ್ಗೆ ಅರಿವು: ಶಾಸಕ ಟಿ.ಎಸ್.ಶ್ರೀವತ್ಸ ಹರ್ಷ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಜಾನಪದ ಉತ್ಸವ ನಡೆಸಿದ್ದಕ್ಕೆ ಕಾಲೇಜಿನ ಸಿಡಿಸಿ ಅಧ್ಯಕ್ಷರೂ ಆದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಹರ್ಷ ವ್ಯಕ್ತಪಡಿಸಿದರು.ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾಗಿದೆ. ಇಂತಹ ಊರಿನಲ್ಲಿ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾನಪದ ಉತ್ಸವ ನಡೆಸಿ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಈ ರೀತಿ ಅರಿವು ಮೂಡಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು.