ಉಡುಪಿ: ಅಮ್ಮನ ಜೋಗುಳದಿಂದ ಹಿಡಿದು ಬದುಕಿನ ಪ್ರತಿ ಹಂತದಲ್ಲೂ ಜನಪದದ ಪ್ರಭಾವ ಇದ್ದೇ ಇರುತ್ತದೆ. ಜನಪದ ಇಲ್ಲದ ದೇಶಗಳಿಲ್ಲ. ಜನಪದ ಜಗತ್ತನ್ನು ಸಾಕ್ಷಾತ್ಕರಿಸಿ ನಿಂತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರಗಳ ಸಹಯೋಗದಲ್ಲಿ 3 ದಿನಗಳ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವದಲ್ಲಿ ‘ತಲ್ಲೂರ್ಸ್ ಜಾನಪದ ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ತತ್ವಪದ, ವಚನಗಳು, ಕೀರ್ತನೆ ಮೊದಲಾದುವುಗಳನ್ನು ನಾಡಿಗೆ ನೀಡಿದ ಮಹನೀಯರ ಜೊತೆಗೆ ಜನಪದರು ನಿಂತಿದ್ದಾರೆ ಎಂದ ಅವರು, ಜಿಲ್ಲೆಯ ಜಾನಪದ ಕಲೆ ನಾಡಿನಾದ್ಯಂತ ಪ್ರದರ್ಶನ ನೀಡಿದ್ದಲ್ಲದೆ ಅನ್ಯ ರಾಜ್ಯಗಳ ಜಾನಪದ ಸಂಸ್ಕೃತಿಯನ್ನು ಉಡುಪಿ ಜನತೆ ನೋಡಿ ಆನಂದ ಪಡುವಂತೆ ಮಾಡಿರುವ ಉಡುಪಿಯ ಸಾಂಸ್ಕೃತಿಕ ಚಿಂತಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಸಾಧನೆ ಮಾದರಿಯಾಗಿದೆ ಎಂದು ಪ್ರಶಂಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ರಂಗಭೂಮಿ ತನ್ನ ವಿಶಿಷ್ಟ ಚಟುವಟಿಕೆಗಳ ಮೂಲಕ ರಂಗಭೂಮಿಯ ವರ್ಚಸನ್ನು ಎತ್ತರಕ್ಕೇರಿಸಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಜಾನಪದ ಪರಿಷತ್ತು ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಎಲ್ಲ ಜಾನಪದ ಕಲೆಗಳು ಉಳಿದು ಬೆಳೆಯುವಂತಾಗಬೇಕು ಎಂಬುದೇ ನನ್ನ ಆಸೆ. ಈ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ರಂಗಭೂಮಿ ಉಡುಪಿ ಸಂಸ್ಥೆಯ ಸಹಕಾರದಲ್ಲಿ ಜಾನಪದ ಉತ್ಸವಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ವರ್ಷ ಕೇರಳದ ಜಾನಪದ ಸಂಸ್ಕೃತಿಯನ್ನು ಪರಿಚಯಿಸಲಾಗಿತ್ತು. ಇದೀಗ ಉತ್ತರ ಭಾರತದ 9 ರಾಜ್ಯಗಳ ಜಾನಪದ ನೃತ್ಯ ಪ್ರಕಾರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎo ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್ ಶುಭ ಹಾರೈಸಿದರು. ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಗಜಾನನ ಉಪಸ್ಥಿತರಿದ್ದರು. ರಂಗಭೂಮಿ ಉಪಾಧ್ಯಕ್ಷ ಆರ್.ಎನ್. ಬಲ್ಲಾಳ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಂದಿಸಿದರು. ಅನುಷಾ ಆಚಾರ್ಯ ಪ್ರಶಸ್ತಿ ಪತ್ರ ವಾಚಿಸಿದರು. ವಿಷ್ಣುಮೂರ್ತಿ ಎನ್. ಕಾರ್ಯಕ್ರಮ ನಿರೂಪಿಸಿದರು. 6 ರಾಜ್ಯಗಳ ತಂಡಗಳ ಜನಪದ ವೈಭವ: ಈ ಜನಪದ ಉತ್ಸವದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಛತ್ತಿಸ್‌ಘಡ ರಾಜ್ಯಗಳ ಜಾನಪದ ತಂಡಗಳ ಪ್ರದರ್ಶನ ನಡೆಯಿತು. ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್ ನಿರೂಪಿಸಿದರು. ಮಾ. 8ರಂದು ಸಮಾರೋಪ ನಡೆಯಲಿದ್ದು, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಅವರಿಗೆ 2026ನೇ ಸಾಲಿನ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಗುವುದು.