ಜನಪದ ಕೇವಲ ಕಲೆಯಲ್ಲ, ಬದುಕಿನ ಹವ್ಯಾಸ: ಸಿದ್ಧಲಿಂಗಪ್ಪ ಕೆಂಬಿ

| Published : Mar 03 2025, 01:47 AM IST

ಸಾರಾಂಶ

ಜನಪದ ಕೇವಲ ಕಲೆಯಲ್ಲ, ಅದೊಂದು ಬದುಕಿನ ಹವ್ಯಾಸ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಈ ಕಲೆ ಎಲ್ಲರ ಬದುಕಲ್ಲಿ ಹಾಸು ಹೊಕ್ಕಾಗಿದೆ. ಆಡು ಭಾಷೆಯಲ್ಲಿಯೇ ಇರುವ ಕಲೆಯಾಗಿರುವ ಕಾರಣ ಎಲ್ಲರನ್ನು ಬಹುಬೇಗ ಆಕರ್ಷಿಸುತ್ತದೆ.

ಬ್ಯಾಡಗಿ: ಸಂಸ್ಕೃತಿಯನ್ನು ಮುಂದುವರಿಸಲು ಜನಪದ ಕಲಾವಿದರು ಅವಶ್ಯಕ. ಜನರಿಂದಲೇ ಹುಟ್ಟಿ ಜನರಲ್ಲಿಯೇ ಬೆರೆತು ಹೋಗಿರುವ ಜನಪದ ಕಲೆಯನ್ನೇ ನಂಬಿ ಬದುಕುತ್ತಿರುವ ಕಲಾವಿದರನ್ನು ಉಳಿಸಿ ಬೆಳೆಸಿದಲ್ಲಿ ಸಂಸ್ಕೃತಿ ಸಹ ಉಳಿಯಲಿದೆ ಎಂದು ವರ್ತಕ ಸಿದ್ಧಲಿಂಗಪ್ಪ ಕೆಂಬಿ ಅಭಿಪ್ರಾಯಪಟ್ಟರು.

ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ಚಾವಡಿ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದ ‘ಜಾನಪದ ಜಾತ್ರೆ’ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಪದ ಕೇವಲ ಕಲೆಯಲ್ಲ, ಅದೊಂದು ಬದುಕಿನ ಹವ್ಯಾಸ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಈ ಕಲೆ ಎಲ್ಲರ ಬದುಕಲ್ಲಿ ಹಾಸು ಹೊಕ್ಕಾಗಿದೆ. ಆಡು ಭಾಷೆಯಲ್ಲಿಯೇ ಇರುವ ಕಲೆಯಾಗಿರುವ ಕಾರಣ ಎಲ್ಲರನ್ನು ಬಹುಬೇಗ ಆಕರ್ಷಿಸುತ್ತದೆ ಎಂದರು.

ಭಾರತೀಯ ಸಂಸ್ಕೃತಿಯ ಜೀವಾಳ: ರಾಜಣ್ಣ ಮಾಗನೂರ ಮಾತನಾಡಿ, ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಭಾರತೀಯ ಸಂಸ್ಕೃತಿ ಜೀವಾಳವಾಗಿವೆ. ಮನುಷ್ಯನ ಹುಟ್ಟಿನಿಂದಲೂ ಜತೆಗೆ ಬಂದಿರುವ ಜನಪದ ಕಲೆ ಮನುಷ್ಯ ಸಹಜ ಗುಣಗಳಿಂದ ಹೊರಹೊಮ್ಮಿದವುಗಳಾಗಿವೆ ಎಂದರು.

ನಾಡಿನ ಇತಿಹಾಸ ನೆನಪಿನಲ್ಲಿ: ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಮಾತನಾಡಿ, ಜಾನಪದ ವಿವಿ ಹೊಂದಿರುವ ಹಾವೇರಿ ಜಿಲ್ಲೆ ಕನ್ನಡನಾಡಿನ ಇತಿಹಾಸ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದೆ. ಹಿಂದಿನ ಅದೆಷ್ಟೋ ಆಚಾರ ವಿಚಾರಗಳು ಪದ್ಧತಿಗಳು ಹಾಗೂ ಸಂಪ್ರದಾಯಗಳು ಇಂದಿನ ಜನರ ಕಲ್ಪನೆಯಲ್ಲಿಲ್ಲ. ಹೀಗಾಗಿ ನಾವು ಜನಪದ ಅವಲಂಬಿಸಬೇಕಾಗಿದೆ ಎಂದರು.ಗಮನ ಸೆಳೆದ ಕಾರ್ಯಕ್ರಮ: ಕನ್ನಡ ಕೋಗಿಲೆ ವಿಜೇತ ಖಾಸಿಂ ಅಲಿ ಹಾಗೂ ಹನುಮಂತ ಬಟ್ಟೂರ್, ವಿಜಯ, ಅರ್ಚನಾ ಹಾಗೂ ಜೂ. ವಿಷ್ಣುವರ್ಧನ ಮತ್ತು ಅಂಕಿತಾ ಸೇರಿದಂತೆ ಬೆಂಗಳೂರ ಬಾಯ್ಸ್ ಡಾನ್ಸ್ ಟೀಂ ನಡೆಸಿಕೊಟ್ಟ ಕಾರ‍್ಯಕ್ರಮಗಳು ಎಲ್ಲರ ಗಮನ ಸೆಳೆದವು.ಮಲ್ಲಿಕಾರ್ಜುನಪ್ಪ ಕೆಂಬಿ, ಸಾಹಿತಿ ಸಂಕಮ್ಮ ಸಂಕಣ್ಣನವರ, ಕದಳಿ ವೇದಿಕೆ ಅಧ್ಯಕ್ಷೆ ಗೀತಾ ಕಬ್ಬೂರ, ಬಸಮ್ಮ ಮಠದ, ಜೆ.ಎಚ್. ಪಾಟೀಲ, ಹೊನ್ನೂರಪ್ಪ ಕಾಡಸಾಲಿ, ಸುರೇಶ ಛಲವಾದಿ, ಗಂಗಣ್ಣ ಎಲಿ, ಶಂಭು ಮಠದ, ಚಿಕ್ಕಪ್ಪ ಹಾದಿಮನಿ, ಚಿಕ್ಕಪ್ಪ ಛತ್ರದ, ಶಂಭಣ್ಣ ಬಿದರಿ, ದುರ್ಗೆಶ ಗೋಣೆಮ್ಮನವರ, ಜಯಪ್ಪ ಹುಣಸಿಮರದ, ಮಂಜುನಾಥ ಉಪ್ಪಾರ ಸೇರಿದಂತೆ ಹಲವು ಉಪಸ್ಥಿತರಿದ್ದರು. ಎ.ಟಿ. ಪೀಠದ ಕಾರ್ಯಕ್ರಮ ನಿರ್ವಹಿಸಿದರು.

ವಿಶೇಷ ಹೋಮ ಹವನ: ಗ್ರಾಮದೇವೆತೆ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಘಟಸ್ಥಾಪನೆ ಕಾರ್ಯಕ್ರಮ ಜರುಗಿತು, ಗಣಪತಿ ಪುರ್ಣಾಹುತಿ, ನವಗ್ರಹ, ಅಷ್ಟದಿಕ್ಪಾಲಕರ ಸಪ್ತ ಸಭಾಪತಿ, ನವದುರ್ಗಾ, ಲಕ್ಷ್ಮಿ ನಾರಾಯಣ, ಉಮಾ ಮಹೇಶ್ವರ ಹಾಗೂ ದುರ್ಗಾ ಹೋಮ ಸೇರಿದಂತೆ ಹಲವು ಪೂಜಾ ಕಾರ‍್ಯಕ್ರಮಗಳು ವೇದಮೂರ್ತಿ ಚನ್ನಬಸಯ್ಯ ಹಿರೇಮಠ ಹಾಗೂ ವೇದಮೂರ್ತಿ ವೀರಯ್ಯ ಹಿರೇಮಠ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಬ್ಯಾಡಗಿ ವತಿಯಿಂದ ಜರುಗಿದವು.