ಸಾರಾಂಶ
ಶಿಗ್ಗಾಂವಿ: ಕವಿಗಳು ತಮ್ಮ ಕೃತಿಗಳಲ್ಲಿ ಪ್ರಸ್ತುತ ಸಮಸ್ಯೆಗಳ ಕುರಿತು ಓದುಗರಿಗೆ ಮನ ಮುಟ್ಟುವಂತೆ ಹೇಳುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನವನ್ನು ಪ್ರಬುದ್ಧವಾಗಿ ಮಾಡಿದ್ದಾರೆ. ಓದುಗನನ್ನು ಭಾವನೆಗಳಲ್ಲಿ ಬಂಧಿಸುವ ಶಕ್ತಿ ಈ ಕೃತಿಗಳಿಗಿದೆ ಎಂದು ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ತಿಳಿಸಿದರು.ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿವಿಯ ಮಲ್ಲಿಗೆದಂಡೆ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಪಂ. ಪುಟ್ಟರಾಜ ಗವಾಯಿಗಳ ಕಲಾಸಂಸ್ಥೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಜಾವಿವಿ ಆಶ್ರಯದಲ್ಲಿ ಆಯೋಜಿಸಿದ್ದ ದೇವರಾಜ ಸುಣಗಾರ ಮತ್ತು ವಿಶ್ವನಾಥ ಬಂಡಿವಡ್ಡರ ಅವರ ಹೊಸ ಪುಸ್ತಕಗಳ ವಿಮರ್ಶಾ ಕಾರ್ಯಕ್ರಮವಾದ ಪುಸ್ತಕ ಪರಿಮಳ- ೧ ಉದ್ಘಾಟಿಸಿ ಮಾತನಾಡಿ, ಜಾನಪದವು ತಾಯಿ ಬೇರಾಗಿದ್ದು, ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಮೂಲವಾಗಿದೆ. ಕಜಾವಿವಿ ಜಾನಪದ ಸಾಹಿತ್ಯ ಲೋಕದ ಎಲ್ಲ ಕಾರ್ಯಗಳಿಗೂ ಬೆನ್ನೆಲುಭಾಗಿ ನಿಲ್ಲುತ್ತದೆ ಎಂದರು.ಕಜಾವಿವಿಯ ಸಹಾಯಕ ಕುಲಸಚಿವ ಶಹಜಹಾನ ಮುದಕವಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ ಅವರು ನಮ್ಮ ವಿವಿಯಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯ್ದ ಬರಹಗಾರರ ಹೊಸ ಪುಸ್ತಕ ವಿಮರ್ಶೆ ಹಾಗೂ ಲೇಖಕ ಓದುಗ ದೊರೆಗಳ ಸಂಗಮ ಮತ್ತು ಸಂವಾದ ಕಾರ್ಯಕ್ರಮವಾದ ಪುಸ್ತಕ ಪರಿಮಳ- ೧ರಲ್ಲಿ ಪ್ರಭುವಾಗು ಪ್ರಜಾಪ್ರಭುತ್ವದಲ್ಲಿ ಮತ್ತು ಬೆತ್ತ ಕೃತಿಗಳನ್ನು ಆಯ್ದುಕೊಂಡು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ಕವಿಗಳಾದ ದೇವರಾಜ ಸುಣಗಾರ ಮತ್ತು ವಿಶ್ವನಾಥ ಬಂಡಿವಡ್ಡರ ಅವರು ರಚಿಸಿದ ಪುಸ್ತಕಗಳನ್ನು ವಿಮರ್ಶಕರಿಂದ ವಿಮರ್ಶೆಗೆ ಒಳಪಡಿಸಿ ಕವಿಗಳ ಭಾವನೆಗಳನ್ನು ಓದುಗ ದೊರೆಗಳಿಗೆ ತಲುಪಿಸುವ ಸದುದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಕಜಾವಿವಿಯ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮಿ ಗೇಟಿಯವರ, ಡಾ. ಚಂದ್ರಪ್ಪ ಸೊಬಟಿ, ಶಸಾಪ ಅಧ್ಯಕ್ಷ ಮಲ್ಲಪ್ಪ ರಾಮಗೇರಿ, ಸೇರಿದಂತೆ ಕಸಾಪ ಪದಾಧಿಕಾರಿಗಳಾದ ಲಲಿತಾ ಹಿರೇಮಠ, ರಮೇಶ ಹರಿಜನ, ಮಾಂತೇಶ ನಾಯ್ಕೋಡಿ, ಸಿ.ಡಿ. ಯತ್ನಳ್ಳಿ, ಶಶಿಕಾಂತ ರಾಠೋಡ, ಶಂಬು ಕೇರಿ, ಕಾನಿಪ ಪದಾಧಿಕಾರಿಗಳಾದ ಬಿ.ಎಸ್. ಹಿರೇಮಠ, ಬಸವರಾಜ ಹಡಪದ, ಗೌಡಪ್ಪ ಬನ್ನೆ ಸೇರಿದಂತೆ ಫಕ್ಕಿರೇಶ ಕೊಂಡಾಯಿ, ಸಂಜನಾ ರಾಯ್ಕರ ಸಂತೋಷ ಶಿವಪೂರ, ಬಿ.ವೈ. ಉಪ್ಪಾರ, ಸಂಜೀವ ಈಶಾಪೂರ ಇತರರಿದ್ದರು.
ಓದುಗರೊಂದಿಗೆ ಸಂವಾದದೇವರಾಜ ಸುಣಗಾರ ಅವರ ಪ್ರಭುವಾಗು ಪ್ರಜಾಪ್ರಭುತ್ವದಲ್ಲಿ ಕೃತಿಯನ್ನು ಕಜಾವಿವಿಯ ಜಾನಪದ ವಿಭಾಗದ ಮುಖ್ಯಸ್ಥ ಡಾ| ಚಂದ್ರಪ್ಪ ಸೊಬಟಿ ವಿಮರ್ಶಿಸಿದರು. ಬಂಡಿವಡ್ಡರ ಅವರ ಬೆತ್ತ ಕೃತಿಯನ್ನು ಶಿಕ್ಷಕ ಮಹಾಂತೇಶ ನಾಯ್ಕೋಡಿ ವಿಮರ್ಶಿಸಿದರು. ಕವಿಗಳಾದ ದೇವರಾಜ ಸುಣಗಾರ ಮತ್ತು ಬಂಡಿವಡ್ಡರ ಅವರು ಓದುಗ ದೊರೆಗಳೊಂದಿಗೆ ಸಂವಾದ ನಡೆಸಿದರು.