ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದ: ಬೆಳವಾಡಿ ಮಂಜುನಾಥ್

| Published : Apr 13 2025, 02:05 AM IST

ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದ: ಬೆಳವಾಡಿ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರಎಲ್ಲ ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದವೇ ಆಗಿದೆ ಎಂದು ಜಾನಪದ ಸಾಹಿತಿ ಬೆಳವಾಡಿ ಮಂಜುನಾಥ್ ಅಭಿಪ್ರಾಯ ಪಟ್ಟರು.

ನೃತ್ಯ ಪ್ರದರ್ಶನ, ಮುಗಳಿ ಜಾತ್ರೋತ್ಸವದಲ್ಲಿ ಜಾನಪದ ಗೀತ ಮಾಧುರ್ಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಎಲ್ಲ ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದವೇ ಆಗಿದೆ ಎಂದು ಜಾನಪದ ಸಾಹಿತಿ ಬೆಳವಾಡಿ ಮಂಜುನಾಥ್ ಅಭಿಪ್ರಾಯ ಪಟ್ಟರು. ಕರ್ನಾಟಕ ಜಾನಪದ ಪರಿಷತ್ತಿನ ಅಜ್ಜಂಪುರ ತಾಲೂಕು ಘಟಕ ಮತ್ತು ಶ್ರೀ ಕ್ಷೇತ್ರ ಮುಗಳಿ ವೀರಾಂಜನೇಯ ಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ ಮುಗಳಿ ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ ಜಾನಪದ ಗೀತ ಮಾಧುರ್ಯ ಮತ್ತು ನೃತ್ಯ ಪ್ರದರ್ಶನ ಉಧ್ಘಾಟಿಸಿ ಮಾತನಾಡಿದರು.ಕರ್ನಾಟಕ ಜಾನಪದ ಪರಿಷತ್ತು ವಿಶ್ವ ಮಾನ್ಯತೆ ಪಡೆದಿರುವುದು ಕನ್ನಡ ನಾಡಿಗೆ ಹೆಮ್ಮೆಯ ವಿಚಾರ. ಇದು ಪ್ರಪಂಚದ 52ನೇ ವಿಶ್ವ ಸಾಂಸ್ಕೃತಿಕ ಪಾರಂಪರಿಕ ತಾಣವೆಂದು ಗುರುತಿಸಲ್ಪಟ್ಟಿದೆ. ದೇಶದ ಐತಿಹಾಸಿಕ ಜಾನಪದ ಸಾಂಸ್ಕೃತಿಕ ತಾಣ ಎಂಬ ಹೆಗ್ಗಳಿಕೆ ಪಡೆವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಜಾನಪದ ಸಂಸ್ಥೆಯಾಗಿದೆ. ಈ ಆಧುನಿಕ ಕಾಲದ ಸಾಹಿತ್ಯ, ಸಂಗೀತ, ಸಂಸ್ಕೃತಿ, ಕಲೆ ಇವೆಲ್ಲವೂ ಜಾನಪದ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಎಲ್ಲ ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದವೇ ಆಗಿದೆ ಎಂದರು.ಮುಖ್ಯ ಅತಿಥಿಗಳಾಗಿದ್ದ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಅಪ್ಪುಗೆರೆ ತಿಮ್ಮರಾಜು ಮಾತನಾಡಿ, ಇಂದಿನ ಯುವ ಪೀಳಿಗೆ, ವಿದ್ಯಾರ್ಥಿಗಳು, ಯುವ ಸಾಹಿತಿಗಳು, ಜಾನಪದ ಕಲೆ ಸಾಹಿತ್ಯ ಸಂಗೀತಕ್ಕೆ ಹೆಚ್ಚು ಒತ್ತು ನೀಡಬೇಕು. ಶಾಲಾ ಕಾಲೇಜು ಹಂತದಲ್ಲೇ ಜಾನಪದ ಸಾಹಿತ್ಯ ಕಲೆಗೆ ಸಂಭಂಧಿಸಿದಂತೆ ಹೆಚ್ಚು ಹೆಚ್ಚು ಕಾರ್ಯಕ್ರಮ ನಡೆಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಸರ್ಕಾರ, ಖಾಸಗಿ ಹಾಗೂ ಸಾರ್ವಜನಿಕವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಗೀತ ಮುಂತಾದ ಕಲಾ ವಿಭಾಗಗಳಿಗೆ ಕಾರ್ಯಕ್ರಮಗಳ ಆಯೋಜಕರು ಹೆಚ್ಚು ಒತ್ತು ನೀಡದಿದ್ದರೆ ಆಧುನಿಕ ಡಿ.ಜೆ ಸಂಗೀತ ನೃತ್ಯಗಳ ಅಬ್ಬರದಲ್ಲಿ ಜಾನಪದ ಕಲೆ, ಸಾಹಿತ್ಯ ಹಾಗೂ ಸಂಗೀತ ಸಂಸ್ಕೃತಿಗಳು ಸೊರಗಿ ಹೋಗುವುದರಲ್ಲಿ ಅನುಮಾನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾಡಿನ ಎಲ್ಲ ಕಲಾ ಪೋಷಕರು ಜಾನಪದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು. ಜಾನಪದ ಪರಿಷತ್ತಿನಿಂದ ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ಡಾ. ಮಾಳೇನಹಳ್ಳಿ ಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರನ್ನು ವಾದ್ಯಗಳೊಂದಿಗೆ ಮತ್ತು ಪೂರ್ಣ ಕುಂಭ ಸ್ವಾಗತದ ಮೂಲಕ ವೇದಿಕೆವರೆಗೆ ಕರೆ ತರಲಾಯಿತು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೆಳವಾಡಿ ಪರಮೇಶ್ವರಪ್ಪ ನವರನ್ನು ಸನ್ಮಾನಿಸಲಾಯಿತು. ಡಾ. ಅಪ್ಪುಗೆರೆ ತಿಮ್ಮರಾಜು ಮತ್ತು ಆರ್ ನಾಗೇಶ್, ಚಿಕ್ಕಾನವಂಗಲ ಶಂಕ್ರಪ್ಪ ನವರ ತಂಡ ಜಾನಪದ ಗೀತ ಗಾಯನ ನಡೆಸಿಕೊಟ್ಟರು. ಆನಂತರ ಚೌಡಿಕೆ ಮೇಳ ಭಜನಾ ಕಾರ್ಯಕ್ರಮ ನಡೆಯಿತು.

ಗೌರವಾಧ್ಯಕ್ಷ ಮರುಳ ಸಿದ್ದಪ್ಪ, ಗಾಯಕ ನಾಗೇಶ್,ಉಪಾಧ್ಯಕ್ಷ ತಿಪ್ಪೇಶಪ್ಪ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಪಿ ಪರಮೇಶ್ವರಪ್ಪ,ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರಪ್ಪ, ಗಂಗಾಧರ,ಲಿಂಗಮೂರ್ತಿ,ಬಸವರಾಜಪ್ಪ ಮುಂತಾದವರಿದ್ದರು.

12ಎಜೆಪಿ 1.

ಕರ್ನಾಟಕ ಜಾನಪದ ಪರಿಷತ್ತು ಅಜ್ಜಂಪುರ ತಾಲೂಕು ಘಟಕ ಹಾಗು ಶ್ರೀ ಕ್ಷೇತ್ರ ಮುಗಳಿ ವೀರಾಂಜನೇಯ ಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ ಮುಗಳಿಯಲ್ಲಿ ನಡೆದ ಜಾನಪದ ಗೀತ ಮಾಧುರ್ಯ ಮತ್ತು ನೃತ್ಯ ಪ್ರದರ್ಶನದ ಉದ್ಘಾಟನೆ ನಡೆಯಿತು. ಅಂತಾರಾಷ್ಟ್ರೀಯ ಜಾನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಬೆ‍ಳವಾಡಿ ಮಂಜುನಾಥ್‌,ಸುರೇಶ್ ಮತ್ತಿತರರು ಇದ್ದರು.