ಮಾನವೀಯ ಮೌಲ್ಯ ತಿಳಿಸುವ ಜಾನಪದ

| Published : Apr 06 2025, 01:47 AM IST

ಸಾರಾಂಶ

ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ಜಾನಪದವೂ ಮಾನವೀಯ ಮೌಲ್ಯ ತಿಳಿಸುತ್ತವೆ.

ಕುಷ್ಟಗಿ:

ಕಲೆ, ಸಂಸ್ಕೃತಿ, ಸಂಪ್ರದಾಯ ಒಳಗೊಂಡಿರುವ ಜಾನಪದವೂ ನಮ್ಮ ಜೀವನ ಕ್ರಮ ಕಲಿಸುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ಬಿನ್ನಾಳ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ಜಾನಪದವೂ ಮಾನವೀಯ ಮೌಲ್ಯ ತಿಳಿಸುತ್ತವೆ ಎಂದರು.

ವಿವಿಧ ಸಂಸ್ಕೃತಿ, ಸಂಪ್ರದಾಯ ಒಳಗೊಂಡಿರುವ ಜಾನಪದಕ್ಕೆ ಹುಟ್ಟು-ಸಾವಿಲ್ಲ. ಈ ದಿಸೆಯಲ್ಲಿ ಯುವಕರು ಯಾಂತ್ರಿಕ ಜೀವನ ಶೈಲಿ ಬದಿಗಿಟ್ಟು, ಜಾನಪದ ಶೈಲಿಯ ಬದುಕು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಡಾ. ಎಸ್‌.ವಿ. ಡಾಣಿ ಮಾತನಾಡಿ, ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೋಹಕ್ಕೆ ಒಳಗಾಗಿ ದೇಶಿಯ ಕಲೆ, ಸಂಸ್ಕೃತಿ ಮರೆಯುತ್ತಿದ್ದಾರೆ. ಸಂಸ್ಕೃತಿ ಉಳಿಸಲು, ಹೊಸ ತಲೆಮಾರಿಗೆ ಪರಿಚಯಿಸಲು ಜಾನಪದ ಉತ್ಸವ ಆಯೋಜಿಸಲಾಗಿದೆ ಎಂದರು.

ದೇಶಿಯ ಸಂಸ್ಕೃತಿ ಸಂರಕ್ಷಿಸುವ ಹಾಗೂ ಮನುಷ್ಯನ ಬದುಕಿನೊಂದಿಗೆ ನೇರ ಸಂಬಂಧವಿರುವ ಜಾನಪದ ಸಂಸ್ಕೃತಿ, ಕಲೆ ಸೊಗಡಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜಾನಪದವು ಗ್ರಾಮೀಣ ಭಾಗದಲ್ಲಿ ನೆಲೆ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಸಂಪ್ರದಾಯ ಉಡುಗೊರೆ:

ಜಾನಪದ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳು ಪಂಚೆ, ಅಂಗಿ ಧರಿಸಿ ಗ್ರಾಮೀಣರಂತೆ ಕಾಣಿಸಿಕೊಂಡರೆ, ಹುಡುಗಿಯರು ಇಳಕಲ್ ಸೀರೆ, ರೇಷ್ಮೆ, ಸೆರಗಿನ ಸೀರೆ ಸೇರಿದಂತೆ ಬಗೆಬಗೆಯ ಸೀರೆಗಳಲ್ಲಿ ಮಿಂಚಿದರು. ಮೂಗಿಗೆ ಮೂಗುತಿ, ಕಿವಿಯಲ್ಲಿ ಆಕರ್ಷಕ ಓಲೆ ಆಕರ್ಷಣೆ ಹೆಚ್ಚಿಸಿದವು.

ದೇಶಿಯ ಪದ್ಧತಿಯ ಆಹಾರ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಜಾನಪದ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಬಸಪ್ಪ ಚೌಡ್ಕಿ, ದಾವಲಸಾಬ ಅತ್ತಾರ, ಶರಣಪ್ಪ ಬನ್ನಿಗೋಳ, ಶಿವರಾಯಪ್ಪ ತೆಗ್ಗಿಹಾಳ, ಬಾಬು ದಾವಲಸಾಬ ಅತ್ತಾರ, ನಾಗಪ್ಪ ಜಿರಗಡ್ಡಿ, ನಿಂಗಪ್ಪ ಸೋಮಲಾಪುರ ಅವರು ಜಾನಪದ ಗೀತೆ, ಗೀಗಿಪದ, ಲಾವಣಿಪದ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.