ಸಾರಾಂಶ
ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10ನೇ ತಂಡದಿಂದ ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.
ಕೊಪ್ಪಳ: ಸಂಭವನೀಯ ಅತಿವೃಷ್ಟಿ, ಅನಾವೃಷ್ಟಿಗೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಎನ್.ಡಿ.ಆರ್.ಎಫ್. ಇನ್‌ಸ್ಪೆಕ್ಟರ್ ಅಜಯಕುಮಾರ್ ಹೇಳಿದರು.
ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10ನೇ ತಂಡದಿಂದ ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10ನೇ ತಂಡದಿಂದ ಸಂಭವನೀಯ ವಿಪತ್ತು, ಪ್ರವಾಹ ಸ್ಥಳಗಳಿಗೆ ಆಗಮಿಸಿ ಸಮುದಾಯ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಸಂಭವನೀಯ ಅತಿವೃಷ್ಟಿ ಹಾಗೂ ಅನಾವೃಷ್ಟಿ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕೃತಿ ವಿಕೋಪದಿಂದ ಆಗುವ ಅನಾಹುತ, ಅನಿಲ ಸೋರಿಕೆ ತಡೆಗಟ್ಟುವಿಕೆ, ಸುನಾಮಿ, ಭೂಕಂಪ, ಅಗ್ನಿ ಅವಘಡ ಹಾಗೂ ಸಿಡಿಲು ಬಡಿತದಿಂದ ರಕ್ಷಣೆ, ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಆಗುವ ಅನಾಹುತಗಳು ಮತ್ತು ಇನ್ನಿತರ ಅನಾಹುತಗಳಿಂದ ಸಾರ್ವಜನಿಕರು ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಎನ್‌ಡಿಆರ್‌ಎಫ್ ತಂಡದ ಸದಸ್ಯರಾದ ವಜ್ರಚೇತನ ಮಾಹಿತಿ ನೀಡಿದರು. ಎನ್‌ಡಿಆರ್‌ಎಫ್ ತಂಡದ ಸದಸ್ಯರು ಹಾಗೂ ವಿದ್ಯಾರ್ಥಿಗಳಿಂದ ಅಣಕು ಪ್ರದರ್ಶನ ನಡೆಯಿತು.
ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಗಂಗಾವತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಎನ್‌ಡಿಆರ್‌ಎಫ್ ತಂಡದ ಎಎಸ್‌ಐ ಸೋಮ್ ಬಿರ್ ಕುಮಾರ್, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ್ರು, ಶಿರಸ್ತೇದಾರ ರವಿಕುಮಾರ ನಾಯಕವಾಡಿ, ಶಿಕ್ಷಣ ಇಲಾಖೆಯ ಟಿಪಿಒ (ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು) ಉಮಾದೇವಿ ಪಾಟೀಲ್, ಆನೆಗೊಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗೌಡ್ರ, ಗ್ರಾಪಂ ಸದಸ್ಯರಾದ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ ಹಾಗೂ ಸುಶೀಲಾಬಾಯಿ, ಕಂದಾಯ ನಿರೀಕ್ಷಕ ಬಸೀರುದ್ದೀನ್, ಶಾಲಾ ಮುಖ್ಯಶಿಕ್ಷಕರಾದ ವಿಜಯಕುಮಾರ್, ಎನ್.ಡಿ.ಆರ್.ಎಫ್. ತಂಡದ ಸದಸ್ಯರಾದ ವಜ್ರಚೇತನ, ಗಂಗಾಧರ ಚಿಕ್ಕೋಡಿ, ಕರುಣಾಮೂರ್ತಿ, ಶಶಿಕಾಂತ, ಗಂಗಾಧರ ಶಂಕರಪ್ಪ, ಗ್ರಾಪಂ ಕಾರ್ಯದರ್ಶಿ ಮನೋರಮಾ, ತಾಲೂಕು ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾಮ ಆಡಳಿತಾಧಿಕಾರಿ ಮಹಾಲಕ್ಷ್ಮಿ, ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.