ರಸ್ತೆ ನಿಯಮ ದಂಡದ ಭಯದಿಂದ ಪಾಲಿಸುವುದಲ್ಲ. ನಮ್ಮ ಜೀವ ರಕ್ಷಣೆಗಾಗಿ ಜವಾಬ್ದಾರಿಯಿಂದ ರಸ್ತೆ ನಿಯಮ ಪಾಲಿಸಬೇಕು ಎಂದು ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.
ಶಿರಹಟ್ಟಿ: ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧಾರಣೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಮತ್ತು ವೇಗ ನಿಯಂತ್ರಣದಂತಹ ಕ್ರಮಗಳು ಅಪಘಾತ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಸ್ತೆ ನಿಯಮ ದಂಡದ ಭಯದಿಂದ ಪಾಲಿಸುವುದಲ್ಲ. ನಮ್ಮ ಜೀವ ರಕ್ಷಣೆಗಾಗಿ ಜವಾಬ್ದಾರಿಯಿಂದ ರಸ್ತೆ ನಿಯಮ ಪಾಲಿಸಬೇಕು ಎಂದು ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.
ಪಟ್ಟಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಹಟ್ಟಿ ಘಟಕದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಹಾಗೂ ಇಂಧನ ಉಳಿತಾಯ ಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧಾರಣೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಮತ್ತು ವೇಗ ನಿಯಂತ್ರಣದಂತಹ ಕ್ರಮಗಳು ಅಪಘಾತ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿವರ್ಷ ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ತಿಂಗಳಾಗಿ ಆಚರಿಸಲಾಗುತ್ತದೆ. ಆದರೂ ಇದರ ಮಹತ್ವ ಇನ್ನೂ ಅನೇಕ ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದರು.
ರಸ್ತೆ ಅಪಘಾತಗಳಿಂದಾಗುವ ಸಾವು ಮತ್ತು ಗಂಭೀರ ಗಾಯ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ರಸ್ತೆ ಸುರಕ್ಷತೆ ಅರಿವು ಮೂಡಿಸಲಾಗುತ್ತಿದೆ. ಇತ್ತೀಚಿನ ಅಂಕಿ- ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ 1.7 ಲಕ್ಷಕ್ಕಿಂತ ಹೆಚ್ಚು ಜನರು ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಅಂದರೆ, ಪ್ರತಿದಿನ ಸರಾಸರಿ 475 ಸಾವು ಸಂಭವಿಸುತ್ತಿವೆ.ಕರ್ನಾಟಕದಲ್ಲಿ ಮಾತ್ರವೇ ವರ್ಷಕ್ಕೆ ಸುಮಾರು 12,000 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದು, ನಿರಂತರ ಜಾಗೃತಿ ಮತ್ತು ತಡೆ ಕ್ರಮಗಳ ಅಗತ್ಯತೆ ಇದು ಸ್ಪಷ್ಟಪಡಿಸುತ್ತದೆ. ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತಾ ಬೀದಿ ನಾಟಕ, ಬೈಕ್ ರ‍್ಯಾಲಿ ಮೂಲಕ ಹೆಲ್ಮೆಟ್ ವಿತರಣೆಯಂತಹ ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆ ಅಪಘಾತಗಳಲ್ಲಿ ಮಧ್ಯಮ ವಯಸ್ಸಿನವರು ಸಾವಿಗೀಡಾದ ಮಾಹಿತಿ ಇದೆ. ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವ ಮೂಲಕ ರಸ್ತೆ ಅಪಘಾತ ತಡೆಗಟ್ಟಿ ಜೀವ ರಕ್ಷಿಸಿಕೊಳ್ಳಿ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ಕರೆ ನೀಡಿದರು.ಲಕ್ಷ್ಮೇಶ್ವರ ಘಟಕ ವ್ಯವಸ್ಥಾಪಕಿ ಸವಿತಾ ಆದಿ ಮಾತನಾಡಿ, ಉತ್ತಮ ಚಾಲನಾ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧವಾದರೂ ನಮ್ಮಲ್ಲಿ ಅದು ತೀರಾ ಸಾಮಾನ್ಯವಾದ ವಿಚಾರ. ದಿನ ಬೆಳಗಾದರೆ ಹಲವಾರು ಅಪ್ರಾಪ್ತ ವಯಸ್ಸಿನವರು ಲೈಸನ್ಸ್ ಅಥವಾ ಪರವಾನಗಿ ಇಲ್ಲದೆಯೇ ಸ್ಕೂಟರ್, ಕಾರು ಮತ್ತು ಬೈಕ್‌ಗಳನ್ನು ಚಲಾಯಿಸುತ್ತಿರುವುದನ್ನು ನೋಡಿದ್ದೇವೆ. ಹಲವು ಬಾರಿ ಇವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗಲೂ ಬುದ್ಧಿ ಹೇಳಿ ಕಳುಹಿಸಿದರೂ ಅದನ್ನು ಅರ್ಥೈಯಿಸಿಕೊಳ್ಳದೇ ಪದೇಪದೆ ಅದೇ ತಪ್ಪನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಹೆತ್ತವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಅಪ್ರಾಪ್ತ ವಾಹನ ಓಡಿಸುವವರು ಎಲ್ಲಿ ಕಾಣುತ್ತಾರೋ ಅಲ್ಲಿಯೇ ಪೊಲೀಸರು ಅಪರಾಧ ದಾಖಲಿಸುತ್ತಾರೆ. ಇದರಿಂದ ಅಂತಹ ವ್ಯಕ್ತಿಗಳು ಪೊಲೀಸರಿಂದ ಸಂಕಷ್ಟಕ್ಕೆ ಒಳಗಾಗುವುದು ಗ್ಯಾರಂಟಿ ಎಂದು ತಿಳಿ ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿದರು. ಘಟಕದ ಉಸ್ತುವಾರಿ ಅಧಿಕಾರಿ ರಾಘವೇಂದ್ರ ಬುದರಪೂರ್, ಸಂಚಾರ ನಿರೀಕ್ಷಕ ರಾಜಶೇಖರ ಮಸಗಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.