ತೋಟಗಳ ಮಧ್ಯೆ ಅಂತರ ಬೇಸಾಯ ಪದ್ಧತಿ ಅನುಸರಿಸಿ

| Published : Sep 06 2025, 01:01 AM IST

ಸಾರಾಂಶ

ಅರಕಲಗೂಡು ತಾಲೂಕಿನಲ್ಲಿ ವರ್ಷಪೂರ್ತಿ ನೀರಾವರಿ ಮೂಲಗಳು ಇರುವ ಹಿನ್ನೆಲೆಯಲ್ಲಿ ರೈತರು ತೋಟಗಾರಿಕೆ ಬೆಳೆಗಳ ನಡುವೆ ಅಂತರ ಬೇಸಾಯ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಎ.ಮಂಜು ತಿಳಿಸಿದರು. ಫಲವತ್ತಾದ ಭೂಮಿ ಇದೆ. ಸರ್ಕಾರದಿಂದಲೂ ಕೂಡ ಸಾಕಷ್ಟು ಸಹಾಯಧನ ರೇಷ್ಮೆ ಕೃಷಿಗೆ ದೊರೆಯುತ್ತಿದೆ. ತಿಂಗಳಿಗೆ ಒಮ್ಮೆ ಈ ಬೆಳೆಯಿಂದ ಆದಾಯ ಬರುತ್ತದೆ. ದೀರ್ಘಾವಧಿ ಬೆಳೆಗಳಿಗೆ ರೈತರು ಮಾರುಹೋಗುವ ಬದಲು ರೇಷ್ಮೆ ಕೃಷಿಯತ್ತ ಮುಂದಾಗಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ವರ್ಷಪೂರ್ತಿ ನೀರಾವರಿ ಮೂಲಗಳು ಇರುವ ಹಿನ್ನೆಲೆಯಲ್ಲಿ ರೈತರು ತೋಟಗಾರಿಕೆ ಬೆಳೆಗಳ ನಡುವೆ ಅಂತರ ಬೇಸಾಯ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಬೆಳವಾಡಿ ಗ್ರಾಮದ ಸಮುದಾಯ ಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗುಬೆಳೆಗಾರರಿಗೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಮತ್ತು ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ರೈತರ ತೋಟಗಳ ಪ್ರಾತ್ಯಕ್ಷತೆ ಕಾರ್ಯಕ್ರಮದಡಿ ವಿವಿಧ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು. ತಾಲೂಕಿನಲ್ಲಿ 2500 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯನ್ನು ರೈತರು ಕೈಗೊಂಡಿದ್ದಾರೆ. ಈ ಬೆಳವಣಿಗೆ ತೃಪ್ತಿದಾಯಕವಾಗಿಲ್ಲ. ಉತ್ತಮ ಪರಿಸರ, ನೀರಾವರಿ ಮೂಲಕಗಳು ಇರುವ ಹಿನ್ನೆಲೆ ತೆಂಗು ಪ್ರದೇಶ ವಿಸ್ತರಣೆಯಾಗಬೇಕಿದೆ. ನಿರೀಕ್ಷೆಗೂ ಮೀರಿ ಬೆಲೆ ದೊರೆಯುತ್ತಿದೆ. ಇತರೆ ಬೆಳೆಗಳನ್ನು ಹೋಲಿಸಿದರೇ ತೆಂಗು ಬೆಳೆಗೆ ರೋಗ ಕಡಿಮೆ ಇದೆ. ಬೇಸಾಯ ಕೂಡ ಅದೇ ನಿಟ್ಟಿನಲ್ಲಿರುತ್ತದೆ. ನಿಯಮಾನುಸಾರ ತೆಂಗು ಬೆಳೆಯನ್ನು ಕೈಗೊಳ್ಳುವ ಜತೆಗೆ ತೋಟಗಾರಿಕೆ,ಇತರೆ ಕೃಷಿಯನ್ನು ಅಂತರ ಬೇಸಾಯವಾಗಿ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.ಇತ್ತೀಚೆಗೆ ಹೈನುಗಾರಿಕೆಯಲ್ಲಿಯೂ ಕೂಡ ಹೆಚ್ಚಿನ ರೈತರು ತೊಡಗಿಕೊಳ್ಳುತ್ತಿದ್ದಾರೆ. ರೇಷ್ಮೆ ಕೃಷಿ ಕೂಡ ಲಾಭದಾಯಕವಾಗಿದೆ. ಫಲವತ್ತಾದ ಭೂಮಿ ಇದೆ. ಸರ್ಕಾರದಿಂದಲೂ ಕೂಡ ಸಾಕಷ್ಟು ಸಹಾಯಧನ ರೇಷ್ಮೆ ಕೃಷಿಗೆ ದೊರೆಯುತ್ತಿದೆ. ತಿಂಗಳಿಗೆ ಒಮ್ಮೆ ಈ ಬೆಳೆಯಿಂದ ಆದಾಯ ಬರುತ್ತದೆ. ದೀರ್ಘಾವಧಿ ಬೆಳೆಗಳಿಗೆ ರೈತರು ಮಾರುಹೋಗುವ ಬದಲು ರೇಷ್ಮೆ ಕೃಷಿಯತ್ತ ಮುಂದಾಗಬೇಕಿದೆ ಎಂದರು.ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ, ಕಳೆದ ವರ್ಷದಿಂದ ಬೆಳವಾಡಿ ಸುತ್ತಮುತ್ತಲ 468 ಮಂದಿ ತೆಂಗು ಬೆಳೆಗಾರರಿಗೆ ಇಲಾಖೆ ವತಿಯಿಂದ ಉಚಿತವಾಗಿ ಪರಿಕರಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ವಿಸ್ತರಣೆ ಆಗಲಿದೆ. ವಾತಾವರಣ, ನಿಯಮಾನುಸಾರ ತೋಟಗಾರಿಕೆ ಬೆಳೆಗಳನ್ನು ಕೈಗೊಂಡರೇ ಅಧಿಕ ಲಾಭ ಬರಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್, ಮಾಜಿ ತಾಪಂ ಸದಸ್ಯ ನಿಂಗೇಗೌಡ, ಗ್ರಾಪಂ ಅಧ್ಯಕ್ಷ ಮೋಹನ್, ಮುಖಂಡರಾದ ಗೋವಿಂದೇಗೌಡ, ಮಂಜುನಾಥ್, ಕಮಲಮ್ಮ, ರೈತ ಸಂಘದ ಅಧ್ಯಕ್ಷ ಯೋಗಣ್ಣ, ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ,ರೈತ ಫಲಾನುಭವಿಗಳು ಇದ್ದರು.