ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಾಯಕದ ಮಹತ್ವವನ್ನು ಜನರಿಗೆ ಸಾರಿ, ಆದರ್ಶ ಮತ್ತು ವ್ಯಕ್ತಿತ್ವವನ್ನು ತಮ್ಮ ಕಾಯಕದ ಮೂಲಕ ಉಳಿಸಿಕೊಂಡು ಬಂದು, ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣ ನುಲಿಯ ಚಂದಯ್ಯನವರು ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯರವರ 917ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರಾಗಿದ್ದರು. ಅವರ ವಚನಗಳಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದರು. ಕಾಯಕವೇ ಕೈಲಾಸ ಎಂಬ ಬಸವಣ್ಣ ನವರ ಮಾತನ್ನು ದೃಢವಾಗಿ ನಂಬಿದ್ದ ಇವರ ಜೀವನವು ಎಲ್ಲರಿಗೂ ಮಾರ್ಗದರ್ಶನ ವಾಗಲಿ ಎಂದರು.ಲೇಖಕರಾದ ಸತ್ಯ ಮಂಗಲ ಮಹಾದೇವ ಮಾತನಾಡಿ, ವಿಜಯಪುರದಿಂದ ಕಲ್ಯಾಣದ ಕಡೆಗೆ ಹೋಗುವ ದಾರಿಯಲ್ಲಿರುವ ಶಿವಣಗಿ ಗ್ರಾಮದಲ್ಲಿ ನುಲಿಯ ಚಂದಯ್ಯನವರು ಇದ್ದ ಬಗ್ಗೆ ಐತಿಹ್ಯಗಳಿವೆ. ಚಂದಯ್ಯನವರು ಹೊಡಕೆ ಹುಲ್ಲನ್ನು ತಂದು ಹಗ್ಗ ಹೊಸೆಯುವ ಕಾಯಕ ನಡೆಸಿ ಅದರಿಂದ ಬಂದ ಹಣವನ್ನು ಗುರು - ಲಿಂಗ - ಜಂಗಮಕ್ಕೆ ಅರ್ಪಿಸುತ್ತಿದ್ದರು. ಕಾಯಕ ಭಾವ ಶುದ್ಧವಾಗಿರಬೇಕು. ಜಂಗಮ ದಾಸೋಹವು ನಿಜವಾದ ಶಿವಪೂಜೆ ಎನ್ನುವುದು ಅವರ ನಿಲುವಾಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ಚಲುವರಾಜ್, ಶಿವಣ್ಣ, ಡಾ.ಅನಿಲ್‌ಕುಮಾರ್, ರಂಗನಾಥ್, ಸ್ವಾಮಿ ನಾಗನಕಟ್ಟೆ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಶಸ್ತ್ರ ಚಿಕಿತ್ಸಾಧಿಕಾರಿ ಮಂಜುನಾಥ್, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಜಯಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಸಮುದಾಯದ ಮುಖಂಡರಾದ ಗುಡ್ಡೆ ವೆಂಕಟೇಶ್, ಶಿವಶಂಕರ್, ಶಿವಪ್ರಕಾಶ್, ಹರೀಶ್ ಬ್ರಹ್ಮಣಿಪುರ ಮತ್ತಿತರರು ಉಪಸ್ಥಿತರಿದ್ದರು.