ಸಂತ ಸೇವಾಲಾಲ್ ರವರ ಆದರ್ಶಗಳನ್ನು ಪಾಲಿಸಿರಿ: ಡಾ.ಕೆ.ಜೆ.ಕಾಂತರಾಜ್

| Published : Feb 17 2024, 01:17 AM IST

ಸಾರಾಂಶ

ಲೋಕ ಕಲ್ಯಾಣಕ್ಕಾಗಿ ದೇಶದಾದ್ಯಂತ ಸುತ್ತಿ ಸಮಾಜದವರಲ್ಲಿ ಜಾಗೃತಿ ಮೂಡಿಸಿ ಸತಿ ಸಹಗಮನ ಪದ್ಧತಿಯಂತಹ ಮಹಿಳಾ ಶೋಷಣೆ ತಡೆಯುವಲ್ಲಿ ಸಂತ ಸೇವಾಲಾಲ್ ಅವರು ಪ್ರಮುಖರಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ, ಕೆ.ಜೆ. ಕಾಂತರಾಜ್ ಹೇಳಿದರು.

ಸಂತ ಸೇವಾಲಾಲ್ ಜಯಂತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಲೋಕ ಕಲ್ಯಾಣಕ್ಕಾಗಿ ದೇಶದಾದ್ಯಂತ ಸುತ್ತಿ ಸಮಾಜದವರಲ್ಲಿ ಜಾಗೃತಿ ಮೂಡಿಸಿ ಸತಿ ಸಹಗಮನ ಪದ್ಧತಿಯಂತಹ ಮಹಿಳಾ ಶೋಷಣೆ ತಡೆಯುವಲ್ಲಿ ಸಂತ ಸೇವಾಲಾಲ್ ಅವರು ಪ್ರಮುಖರಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ, ಕೆ.ಜೆ. ಕಾಂತರಾಜ್ ಹೇಳಿದರು.

ತಾಲೂಕು ಆಡಳಿತದಿಂದ ನಾಡ ಹಬ್ಬಗಳ ಸಮಿತಿ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟನೆ ನೆರವೇರಿಸಿ

ಮಾತನಾಡಿದರು. ಬುಡಕಟ್ಟು ಸಮುದಾಯದ ಲಂಬಾಣಿ ಸಮಾಜದ ಆರಾಧ್ಯ ದೈವರಾಗಿದ್ದಾರೆ, ಮಾನವೀಯ ಮೌಲ್ಯ ಗಳನ್ನು ತುಂಬುತ್ತಾ ಮೌಡ್ಯತೆ ತೊಲಗಿಸಲು ಶ್ರಮಿಸಿದ್ದಾರೆ. ಸಂತ ಸೇವಾಲಾಲ್ ರವರ ಆದರ್ಶಗಳನ್ನು ಚಿಂತನೆಗಳನ್ನು ಎಲ್ಲರೂ ಪಾಲಿಸಬೇಕು. ಎಲ್ಲಾ ಸಮುದಾಯದವರು ಇವರು ಮಾಡಿದ ಸಮಾಜಮುಖಿ ಕೆಲಸಗಳನ್ನು ಸ್ಮರಿಸಬೇಕು ಎಂದು ಹೇಳಿದರು. ಬಂಜಾರ ಬಳಗದ ಆಧ್ಯಕ್ಷ ಬಿ ಕೃಷ್ಣನಾಯ್ಕ ಮಾತನಾಡಿ ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ಪರಿವರ್ತನೆಗೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸಿದವರು ಸಂತ ಸೇವಾಲಾಲ್‌ ಮಾರಿಕಾಂಬ ದೇವಿ ಕೃಪಾರ್ಶಿವಾದದಿಂದ ಜನಿಸಿ, ಬ್ರಹ್ಮಚಾರಿಯಾಗಿ ತಪಸ್ಸು, ಭಕ್ತಿಯೊಂದಿಗೆ ಆಧ್ಯಾತ್ಮಕತೆಯನ್ನು ಈ ಬುಡಕಟ್ಟಿನ ಜನರಲ್ಲಿ ಮೂಡಿಸಿದವರು.

ಡಾ. ಬಿ.ಆರ್ ಅಂಬೇಡ್ಕರ್ ಈ ದೇಶದ ಸಮಸ್ತ ಜನರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಂವಿಧಾನ ಬದ್ದವಾಗಿ ನೀಡಿದ್ದಾರೆ. ಆದ್ದರಿಂದಲೇ ಸರ್ಕಾರಗಳು ಬುಡಕಟ್ಟು ಲಂಬಾಣಿ ಸಮಾಜದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಮಾಡಿಕೊಳ್ಳೋಣ ಎಂದು ಹೇಳಿದರು.

ತಾಲೂಕು ಬಂಜಾರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಮಾತನಾಡಿ ಬಂಜಾರ ಸಮಾಜದ ಬಂಧುಗಳು ಒಗ್ಗಟಾಗಿರ ಬೇಕು ಎಂದು ತಿಳಿಸಿದರು.

ಅಧ್ಯಕ್ಷ ರಾಮನಾಯ್ಕ ಮಾತನಾಡಿ ಬಂಜಾರ ಸಮಾಜದ ಏಳಿಗೆಗೆ ಸಂತ ಸೇವಾಲಾಲರು ಜೀವನವಿಡಿ ದುಡಿದಿದ್ದಾರೆ ಎಂದು ಹೇಳಿದರು. ಗೌರವಾಧ್ಯಕ್ಷ ಸತ್ಯಪ್ಪ, ಉಪಾಧ್ಯಕ್ಷ ಬಸಪ್ಪನಾಯ್ಕ ಮಾತನಾಡಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್, ಉಪವಿಭಾಗೀಯ ಮಟ್ಟದ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

16ಕೆಟಿಆರ್.ಕೆ.09

ತರೀಕೆರೆಯಲ್ಲಿ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜ್ ನೆರವೇರಿಸಿದರು. ಬಂಜಾರ ಬಳಗದ ಆಧ್ಯಕ್ಷ ಬಿ.ಕೃಷ್ಣನಾಯ್ಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್, ಉಪವಿಭಾಗೀಯ ಮಟ್ಟದ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ ಮತ್ತಿತರರು ಇದ್ದಾರೆ.