ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಆದಿ ಜಗದ್ಗುರು ರೇಣುಕಾಚಾರ್ಯರು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಕುಪ್ಪೂರು ಗದ್ದಿಗೆ ಮಠದ ಆಡಳಿತಾಧಿಕಾರಿ ವಾಗೀಶ್ ಪಂಡಿತಾರಾಧ್ಯ ಹೇಳಿದರು.ಪಟ್ಟಣದ ಅರಳೇಪೇಟೆಯಲ್ಲಿರುವ ಶ್ರೀ ಉಚ್ಛಸಗಪ್ಪನವರ ಮಠದ ಭವನದಲ್ಲಿರುವ ಶ್ರೀರೇಣುಕಮಂದಿರದಲ್ಲಿ ರೇಣುಕ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಭೂಲೋಕದಲ್ಲಿ ಅಧರ್ಮ ಅನ್ಯಾಯಗಳು ಹೆಚ್ಚಿದ್ದ ಕಾಲದಲ್ಲಿ ಮಾನವನ ಮೌಲ್ಯಗಳ ಉಳಿದು ಧರ್ಮ ಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ಪಂಚಪೀಠಗಳನ್ನ ಸ್ಥಾಪಿಸಿದರು. ಹುಟ್ಟಿದ ಮನುಷ್ಯ ಸಂಸ್ಕಾರವಂತನಾಗಲು ಅಷ್ಟಾವರಣಗಳು, ಪಂಚಾಕ್ಷರಿಮಂತ್ರˌ ಷಟಸ್ಥಳ ರೂಢಿಸಿಕೊಳ್ಳುವ ಮಾರ್ಗವನ್ನು ವೀರಶೈವ ಧರ್ಮದ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ರೇಣುಕರು ಅಗಸ್ತ್ಯರಿಗೆ ಬೋಧಿಸಿ ರಚನೆ ಮಾಡಿದ್ದಾರೆ ಎಂದರು.
ಶ್ರೀ ಉಚ್ಛಸಂಗಪ್ಪನವರಮಠದ ಸೇವಾಟ್ರಸ್ಟಿನ ಅಧ್ಯಕ್ಷ ಸಿ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಗುರುವಿನ ಅವಶ್ಯವಿರುತ್ತದೆ. ಭಗವಂತನನ್ನು ನೋಡಬೇಕಾದರೆ ಮತ್ತು ಅವನ ಅನುಗ್ರಹ ದೊರಕಬೇಕಾದರೆ ಮೊದಲು ಗುರುವಿನಿಂದ ಸಂಸ್ಕಾರವನ್ನು ಪಡೆದು ಶ್ರದ್ಧಾಭಕ್ತಿಯಲ್ಲಿ ಭಗವಂತನನ್ನು ಒಲಿಸಿಕೊಳ್ಳಬಹುದು ಎನ್ನುವುದಕ್ಕೆ ಪುರಾಣಗಳಲ್ಲಿ ಸಾಕಷ್ಟು ನಿದರ್ಶನ ನೋಡಬಹುದಾಗಿದೆ. ಜಗದ್ಗುರು ರೇಣುಕರು ಮಾನವನ ಜನ್ಮದ ಮೌಲ್ಯಗಳನ್ನ ಎತ್ತಿಹಿಡಿದು ವ್ಯಕ್ತಿ ಜೀವನದ ಸಾರ್ಥಕತೆಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.ರೇಣುಕಮಂದಿರ ಪ್ರಧಾನ ಅರ್ಚಕ ಪಂಚಮುಖಿ ಕುಮಾರಸ್ವಾಮಿ ಶಾಸ್ತ್ರೀˌ ಸಹಕಾರ್ಯದರ್ಶಿ ಎ.ಸೋಮಶೇಖರ್ˌಖಜಾಂಚಿˌಎನ್.ಶಂಕರಪ್ಪˌ ನಿರ್ದೇಶಕಿ ಶಾಂತಮ್ಮˌಎಸ್.ಆರ್.ಶಾಂತಯ್ಯˌ ರೇಣುಕಯ್ಯ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಅನುಪಮಾ ˌಕಾರ್ಯದರ್ಶಿ ಸುಮಪ್ರವೀಣ್ˌ ಟೌನ್ ವೀರಶೈವಲಿಂಗಾಯಿತ ಸಮಾಜದ ಸತ್ಯವತಿˌಅರ್ತಿ ಸಿದ್ಧರಾಮಯ್ಯ ಇತರರಿದ್ದರು.