ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶ ಅನುಸರಿಸಿ

| Published : Mar 17 2025, 12:32 AM IST

ಸಾರಾಂಶ

ಶಿವಾಜಿ ಅವರ ಧೈರ್ಯ, ಶೌರ್ಯ, ನೇರ ನುಡಿಯನ್ನು ಎಲ್ಲರೂ ಮೆಚ್ಚಲೇಬೇಕು. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆಯೋಣ. ಶಿವಾಜಿ ಅವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಇಡೀ ದೇಶಕ್ಕೆ ಮಾದರಿಯಾದಂತಹ ಕ್ರಾಂತಿ ವೀರರು. ಅವರ ಧೈರ್ಯ, ಸ್ಥೈರ್ಯ ಮತ್ತು ನೇರ ನುಡಿಯನ್ನು ಮೆಚ್ಚಬೇಕಾಗಿದೆ. ಯುದ್ಧದ ರೀತಿ ಜೊತೆಯಲ್ಲಿ ನಾವು ಹೋಗುತ್ತಿದ್ದೇವೆ. ಮುಂದಿನ ಪೀಳಿಗೆಯವರಾದಂತಹ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗೋಣ ಎಂದು ಸಂಸದ ಶ್ರೇಯಸ್. ಎಂ. ಪಟೇಲ್ ಅವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಇಡೀ ದೇಶಕ್ಕೆ ಮಾದರಿಯದಂತಹ ಕ್ರಾಂತಿವೀರರಾದ ಛತ್ರಪತಿ ಶಿವಾಜಿ ಮಹಾರಾಜರ ತತ್ವ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಸಂಸದರಾದ ಶ್ರೇಯಸ್. ಎಂ. ಪಟೇಲ್ ಅವರು ಕರೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಅವರ ಧೈರ್ಯ, ಶೌರ್ಯ, ನೇರ ನುಡಿಯನ್ನು ಎಲ್ಲರೂ ಮೆಚ್ಚಲೇಬೇಕು. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆಯೋಣ. ಶಿವಾಜಿ ಅವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಇಡೀ ದೇಶಕ್ಕೆ ಮಾದರಿಯಾದಂತಹ ಕ್ರಾಂತಿ ವೀರರು. ಅವರ ಧೈರ್ಯ, ಸ್ಥೈರ್ಯ ಮತ್ತು ನೇರ ನುಡಿಯನ್ನು ಮೆಚ್ಚಬೇಕಾಗಿದೆ. ಯುದ್ಧದ ರೀತಿ ಜೊತೆಯಲ್ಲಿ ನಾವು ಹೋಗುತ್ತಿದ್ದೇವೆ. ಮುಂದಿನ ಪೀಳಿಗೆಯವರಾದಂತಹ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗೋಣ ಎಂದು ಹೇಳಿದರು.

ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ ಮಾತನಾಡಿ, ಛತ್ರಪತಿ ಶಿವಾಜಿಯವರು ಕೇವಲ ಮರಾಠ ಸಮಾಜಕ್ಕೆ ಸೀಮಿತವಲ್ಲ, ಇಡೀ ವಿಶ್ವಕ್ಕೆ ಆದರ್ಶ ಪುರುಷರಾಗಿದ್ದಾರೆ, ಇವರು ರಾಷ್ಟ್ರ ನಾಯಕ, ಸ್ವರಾಜ್ಯ ಸ್ಥಾಪಕರಾಗಿದ್ದಾರೆ. ಭಾರತೀಯರೆಲ್ಲರೂ ಒಂದೇ ಎಂಬ ಉದಾತ್ತ ಆದರ್ಶ ಕೊಟ್ಟಿರುವ ಮಹಾಪುರುಷರಲ್ಲಿ ಶಿವಾಜಿ ಅವರೂ ಒಬ್ಬರು, ವಿಶ್ವಕ್ಕೆ ಕೊಡುಗೆ ಸಲ್ಲಿಸಿದ ಮಹನೀಯರನ್ನು ಕೇವಲ ನಾಲ್ಕು ಗೋಡೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.

ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಶಿವಾಜಿಯವರು ವೀರ ಯೋಧರಾಗಿದ್ದು, ವಿಶ್ವ ಪ್ರಸಿದ್ಧರಾಗಿದ್ದಾರೆ. ಶಿವಾಜಿ ಅವರ ಪುತ್ಥಳಿಯನ್ನು ಹಾಸನದಲ್ಲಿ ಶೀಘ್ರದಲ್ಲೇ ಅನಾವರಣ ಮಾಡೋಣ ಹಾಗೂ ಮರಾಠ ಸಮುದಾಯದ ಮಕ್ಕಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಿಕೊಡುವುದರ ಕುರಿತು ನೀವು ಕೂಡ ಮನವಿ ಮಾಡಿದ್ದೀರಿ ಅದನ್ನು ಶೀಘ್ರದಲ್ಲೇ ಶಾಸಕರ ನಿಧಿಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ೩೯೮ನೇ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ಶ್ರೀ ಅಂಬಾಭವಾನಿ ಕಲ್ಯಾಣ ಮಂಟಪ, ಅಗ್ರಹಾರ, ಹಾಸನದಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ಇಲ್ಲಿಂದ ಮೆರವಣಿಗೆ ಹೊರಟು ಹಳೆ ಬಸ್ ಸ್ಟ್ಯಾಂಡ್ ರಸ್ತೆ ಮಾರ್ಗವಾಗಿ ಕಲಾಭವನವರೆಗೆ ಮೆರವಣಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ. ತಾರಾನಾಥ್, ಹಾಸನ ಜಿಲ್ಲಾ ನೌಕರರ ಸಂಘದ ಗೌವಾಧ್ಯಕ್ಷ ಈ. ಕೃಷ್ಣೇಗೌಡ, ವಕೀಲ ವಿಜಯಕುಮಾರ್ ನಾರ್ವೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಹಾಸನ ಜಿಲ್ಲಾಧ್ಯಕ್ಷ ಎನ್ ಲೀಲಾ ಕುಮಾರ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎ.ವಿ. ರುದ್ರಪ್ಪಾಜಿರಾವ್ ಫೋರ್ಪಡೆ, ಗೌರವಾಧ್ಯಕ್ಷ ಎಚ್.ಜೆ. ತುಳಜಿರಾವ್ ಠಾಣ್ಗೆ, ಖಜಾಂಚಿ ಪ್ರಕಾಶ್, ನಿರ್ದೇಶಕ ಸುರೇಶ್ ಇತರರು ಉಪಸ್ಥಿತರಿದ್ದರು. ಯದೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.