ಸಾರಾಂಶ
ಸಾಗರ: ತಮ್ಮೊಳಗಿನ ಅನೇಕ ಪ್ರಶ್ನೆಗಳಿಗೆ ಮೌನವಾಗಿ ಉತ್ತರ ಕಂಡುಕೊಂಡವರು ಭಗವಾನ್ ಮಹಾವೀರರು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ.ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಭಗವಾನ್ ಮಹಾವೀರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಗತ್ತಿನಲ್ಲಿ ಮನುಷ್ಯನಿಗೆ ಬದುಕಲು ಎಷ್ಟು ಹಕ್ಕು ಇದೆಯೋ ಅಷ್ಟೆ ಹಕ್ಕು ಇತರೆ ಪ್ರಾಣಿಪಕ್ಷಿ, ಕ್ರಿಮಿಕೀಟಗಳಿಗೂ ಇದೆ. ತಾನೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ ಎನ್ನುವ ಸರ್ವವ್ಯಾಪಿ ಸಂದೇಶವನ್ನು ಮಹಾವೀರರು ಬೋಧಿಸಿದ್ದಾರೆ ಎಂದು ತಿಳಿಸಿದರು.ಇಂದಿಗೂ ಜೈನಧರ್ಮ ಅಹಿಂಸೆಯನ್ನು ಪಾಲಿಸಿಕೊಂಡು ಬರುತ್ತಿದೆ. ಜಗತ್ತಿಗೆ ಅಹಿಂಸೆಯನ್ನು ಬೋಧಿಸಿ ತನ್ಮೂಲಕ ಶಾಂತಿಯುತ ಸಮಾಜದ ಪರಿಕಲ್ಪನೆ ಬಿತ್ತಿದ್ದು ಜೈನಧರ್ಮವಾಗಿದೆ. ಭಗವಾನ್ ಮಹಾವೀರರ ಆದರ್ಶವನ್ನು ನಾವು ಪಾಲಿಸುವ ಕೆಲಸ ಮಾಡಬೇಕು. ದಾರ್ಶನಿಕರ ಜಯಂತಿ ಆಚರಣೆ ಮೂಲಕ ನಮ್ಮನ್ನು ನಾವು ಸಮಾಜಮುಖಿ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಾ ಬರಬೇಕು ಎಂದು ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಇಂದಿರಾಗಾಂಧಿ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾವೀರ, ಮಹಾವೀರರ ಸಂದೇಶಗಳು ಸರ್ವಕಾಲೀಕ ಪಾಲನೆ ಮಾಡುವಂತಹದ್ದಾಗಿದೆ. ಬದುಕಿ ಬದುಕಲು ಬಿಡಿ ಎನ್ನುವ ಸಂದೇಶ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗುತ್ತದೆ. ತಮ್ಮ ಉತ್ತಮ ನಡವಳಿಕೆ ಮೂಲಕ ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡುವ ಬದುಕು ಎಲ್ಲರದ್ದಾಗಬೇಕು ಎಂದರು.
ಮಹಾವೀರರು ನೀಡಿದ ಸಂದೇಶ ಜೈನಧರ್ಮಕ್ಕೆ ಮಾತ್ರ ಸೀಮಿತವಾಗದೆ ಜಗತ್ತಿನ ಎಲ್ಲರೂ ಪಾಲನೆ ಮಾಡುವಂತಹದ್ದಾಗಿದೆ. ಸರಳವಾದ ಬದುಕು ಮನುಷ್ಯನನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಕೇವಲ ಜಯಂತಿ ಆಚರಣೆ ಮಾಡಿದರೆ ಸಾಲದು. ಅವರ ತತ್ವಾದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಹಸೀಲ್ದಾರ್ ಚಂದ್ರಶೇಖರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಕಲಾ ರಾಜಕುಮಾರ್ ಜೈನ್, ವಿ.ಟಿ.ಸ್ವಾಮಿ ಇನ್ನಿತರರು ಹಾಜರಿದ್ದರು.ಇದಕ್ಕೂ ಮೊದಲು ಮಹಾವೀರರ ಭಾವಚಿತ್ರ ಹೊತ್ತ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.