ಸನಾತನ ಆಚರಣೆಗಳನ್ನು ಯುವಪೀಳಿಗೆ ಅನುಸರಿಸಿ

| Published : Mar 13 2025, 12:54 AM IST

ಸಾರಾಂಶ

ಕಲ್ಪತರು ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರವಾದ ಶ್ರೀ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರ ಸ್ವಾಮಿಯವರ ರಥೋತ್ಸವವು ಬುಧವಾರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಕಲ್ಪತರು ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರವಾದ ಶ್ರೀ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರ ಸ್ವಾಮಿಯವರ ರಥೋತ್ಸವವು ಬುಧವಾರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.

ರಥವನ್ನು ವಿವಿಧ ರೀತಿಯ ಹೂವಿನ ಹಾರಗಳು, ಬಾಳೆಕಂದು, ಮಾವಿನ ತೋರಣ, ಬಣ್ಣ ಬಣ್ಣದ ವಸ್ತ್ರ, ಬಾವುಟಗಳಿಂದ ಶೃಂಗರಿಸಿ ಶಂಕರೇಶ್ವರ ಸ್ವಾಮಿಯ ಮೂರ್ತಿಯನ್ನು ಶ್ರೀಗಳವರ ನೇತೃತ್ವದಲ್ಲಿ ರಥದಲ್ಲಿ ಕುಳ್ಳರಿಸಿ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ನೆರೆದಿದ್ದ ಭಕ್ತ ಸಮೂಹ ರಥವನ್ನು ಎಳೆಯಿತು. ನೆರೆದಿದ್ದ ಭಕ್ತಸಮೂಹ ರಥಕ್ಕೆ ಹೂವು, ದವನ-ಬಾಳೆಹಣ್ಣು, ಮೆಣಸು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳು ಈಡೇರುವಂತೆ ದೇವರಲ್ಲಿ ಹರಕೆ ತೀರಿಸಿ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದ ನಂತರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಪತ್ರಿಕೆಯೊಂದಿಗೆ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶಂಕರೇಶ್ವರ ಸ್ವಾಮಿಯವರ ಜಾತ್ರೆಯು ಒಂದು ವಾರದಿಂದಲೂ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ದವನ, ಬಾಳೆಹಣ್ಣು ಎಸೆಯುವ ಮೂಲಕ ಹರಕೆ ತೀರಿಸುತ್ತಾರೆ. ಶ್ರೀಕ್ಷೇತ್ರವು ಹಿಂದಿನಿಂದಲೂ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವ ಹೊಂದಿದೆ. ಶ್ರೀಕ್ಷೇತ್ರದ ಆರಾಧ್ಯ ದೈವರಾದ ಶ್ರೀ ಶಂಕರೇಶ್ವರ ಮತ್ತು ಶ್ರೀ ರಂಗನಾಥಸ್ವಾಮಿಯವರ ಕೃಪೆ ಹಾಗೂ ಹಿರಿಯ ಗುರುಗಳ ತಪೋಶಕ್ತಿಯಿಂದ ಸುಕ್ಷೇತ್ರ ನಾಡಿನಾದ್ಯಂತ ಹೆಸರುವಾಸಿಯಾಗಿ ಜ್ಞಾನ ಮತ್ತು ಅನ್ನ ದಾಸೋಹವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು ಈ ವರ್ಷ ನಾಡಿಗೆ ಉತ್ತಮ ಮಳೆ, ಬೆಳೆಯಾಗಲಿದೆ. ಹಿಂದಿನ ಶ್ರೀಗಳವರ ಕಾಯಕ, ಭಕ್ತಿ ಮಾರ್ಗ ಮತ್ತು ಭಿಕ್ಷಾಟನೆಯೇ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದ ಶ್ರೀಗಳು ಇಂತಹ ಜಾತ್ರಾ ಧಾರ್ಮಿಕ ಕಾರ್ಯಕ್ರಮಗಳು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವಲ್ಲದೆ ಸನಾತನ ಆಚರಣೆಗಳನ್ನು ಯುವಪೀಳಿಗೆ ಅನುಸರಿಸಲು ಅನುಕೂಲವಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ಜೀವನದ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕು ಸಾಗಿಸಿ ಎಂದು ಭಕ್ತಕೋಟಿಗೆ ಶ್ರೀಗಳು ಕರೆ ನೀಡಿದರು.