ಮಾನಸಿಕ ಸಮಸ್ಯೆಗೆ ಯೋಗ, ಧ್ಯಾನ ಅನುಸರಿಸಿ

| Published : Oct 13 2024, 01:12 AM IST

ಸಾರಾಂಶ

ರಾಮನಗರ: ಮಾನಸಿಕವಾಗಿ ಸದೃಢವಾಗಿರಬೇಕಾದರೆ ದೈಹಿಕವಾಗಿ ಸದೃಡರಾಗಬೇಕು. ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳು ಎದುರಾದಲ್ಲಿ ತಜ್ಞರನ್ನು ಸಂಪರ್ಕಿಸಬೇಕು. ಒತ್ತಡ ನಿವಾರಣೆಗೆ ಯೋಗ, ಧ್ಯಾನದಂತಹ ತಂತ್ರಗಳನ್ನು ಅನುಸರಿಸರಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್. ಸವಿತಾ ಕರೆ ನೀಡಿದರು.

ರಾಮನಗರ: ಮಾನಸಿಕವಾಗಿ ಸದೃಢವಾಗಿರಬೇಕಾದರೆ ದೈಹಿಕವಾಗಿ ಸದೃಡರಾಗಬೇಕು. ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳು ಎದುರಾದಲ್ಲಿ ತಜ್ಞರನ್ನು ಸಂಪರ್ಕಿಸಬೇಕು. ಒತ್ತಡ ನಿವಾರಣೆಗೆ ಯೋಗ, ಧ್ಯಾನದಂತಹ ತಂತ್ರಗಳನ್ನು ಅನುಸರಿಸರಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್. ಸವಿತಾ ಕರೆ ನೀಡಿದರು.

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರೋಟರಿ ಸಿಲ್ಕ್ ಸಿಟಿ, ಐಕಾನ್ ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹೆಚ್ಚು ಒತ್ತಡಗಳಿರುತ್ತದೆ. ವಿವಿಧ ಕಾರಣಗಳಿಂದಾಗಿ ಅವರು ಮಾನಸಿಕ ಒತ್ತಡಕ್ಕೆ ಗುರಿಯಾಗಿರುತ್ತಾರೆ. ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಹಾಗೂ ವೈದ್ಯಕೀಯ ಕ್ಷೇತ್ರಗಳಿಂದ ಉಚಿತ ಸೌಲಭ್ಯ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.

ಕೆಲವರು ತಮಗೆ ಇರುವ ಮಾನಸಿಕ ಸಮಸ್ಯೆಯನ್ನು ಗುಪ್ತವಾಗಿಟ್ಟಿರುತ್ತಾರೆ. ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಂತವರು ಸಂಬಂಧಪಟ್ಟ ಮುಖ್ಯಸ್ಥರೊಂದಿಗೆ ಹೇಳಿಕೊಂಡು ತಮ್ಮ ಕೆಲಸಗಳನ್ನು ಕಡಿಮೆ ಮಾಡಿಕೊಂಡು ತಮಗಿರುವ ಮಾನಸಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕು ಎಂದರು.

ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಬೇಕು. ಒತ್ತಡಗಳನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಬೇಕು. ಮಾನಸಿಕ ಸಮಸ್ಯೆಯಿರುವವರು ಯೋಗ, ಧ್ಯಾನಗಳನ್ನು ರೂಢಿಸಿಕೊಳ್ಳಬೇಕು. ವೈದ್ಯರೊಂದಿಗೆ ಸಮಾಲೋಚಿಸಿ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕರವಾಗಿರುವಂತೆ ಸವಿತಾ ಹೇಳಿದರು.

ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಕುಮಾರ್ ಮಾತನಾಡಿ, ನಮ್ಮ ಮೆದುಳಿನ ಆರೋಗ್ಯವನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಮಾನಸಿಕ ಸಮಸ್ಯೆಗಳಿದ್ದರೆ ಅದನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳಬಾರದು ವೈದ್ಯಾಧಿಕಾರಿಗಳು ಅಥವಾ ಸ್ನೇಹಿತರೊಂದಿಗೆ ಹೇಳಿಕೊಳ್ಳಬೇಕು. ಸದೃಡ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಸದೃಡ ದೈಹಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕು. ಉಚಿತ ಸಲಹೆಗಾಗಿ ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿಮನಸ್ ಸಂಖ್ಯೆ 14416ನ್ನು ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮಂಜುನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಶಶಿಧರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಕಿರಣ್, ಮನೋರೋಗ ತಜ್ಞರಾದ ಶಿವಸ್ವಾಮಿ, ಡಾ. ಆದರ್ಶ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತೆ ಪದ್ಮರೇಖಾ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶ್ರೀಧರ್, ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರಿಯಾಂಕ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾವು ರಾಮನಗರ ಜಿಲ್ಲಾ ಆಸ್ಪತ್ರೆಯಿಂದ ಆಂಜನೇಯ ಸ್ವಾಮಿ ವಿಗ್ರಹದ ಬಳಿ ತಲುಪಿ ಅಲ್ಲಿಂದ ಪೊಲೀಸ್ ಭವನದ ಕಡೆ ಹೊರಟು ಮತ್ತೆ ವಾಪಸ್ಸು ಜಿಲ್ಲಾ ಆಸ್ಪತ್ರೆ ಆವರಣಕ್ಕೆ ತಲುಪಿತು.

12ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜನಜಾಗೃತಿ ಜಾಥಾಕ್ಕೆ ನ್ಯಾಯಾಧೀಶರಾದ ಪಿ.ಆರ್.ಸವಿತಾ ಚಾಲನೆ ನೀಡಿದರು.