ಸಾರಾಂಶ
ಭಗವಾನ್ ಮಹಾವೀರ ಜಯಂತಿ ಆಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಜೈನ ಧರ್ಮದ ತತ್ವಗಳನ್ನು ಅನುಸರಿಸುವುದು ಅಗತ್ಯವೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಮಹಾವೀರ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಶಾಂತಿ ಹಾಗೂ ಅಹಿಂಸೆಯನ್ನು ಬೋಧಿಸಿ ಜೈನಧರ್ಮದ ಉಗಮದಲ್ಲಿ ಪ್ರಮುಖ ಪಾತ್ರವಹಿಸಿರುವ ಮಹಾವೀರರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಗತ್ತಿನ ಸರ್ವತೋಮುಖ ಒಳಿತನ್ನು ಬಯಸಬೇಕು ಎಂದರು.
ಮನುಕುಲಕ್ಕೆ ಅಹಿಂಸಾ ತತ್ವ ಬಹಳ ಅವಶ್ಯಕವಾಗಿದೆ. ಮನುಕುಲಕ್ಕೆ ದಾರಿದೀಪವಾಗಿ ಜಗತ್ತಿಗೆ ಬೆಳಕು ನೀಡಿದವರು ಭಗವಾನ್ ಮಹಾವೀರರು. ಅಹಿಂಸಾ ತತ್ವ ಪಾಲನೆ ಮಾಡದಿದ್ದರೆ ಸಾವು, ನೋವು, ಯುದ್ದಗಳಿಂದಾಗಿ ಜಗತ್ತು ವಿನಾಶದ ಅಂಚಿಗೆ ತಲುಪಲಿದೆ. ಬೇರೆ ಬೇರೆ ಪರಿಣಾಮಗಳಿಂದ ಮನುಷ್ಯ ತನ್ನ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತಾನೆ. ಜೈನಧರ್ಮದ ಮೂಲ ತತ್ವ ‘ನೀನು ಜೀವಿಸು ಇತರರನ್ನು ಜೀವಿಸಲು ಬಿಡು’ ಎಂಬುದಾಗಿದೆ. ಮನುಷ್ಯರು ಅರಿಷಡ್ವರ್ಗಗಳನ್ನು ತ್ಯಜಿಸಬೇಕು. ಮುಖ್ಯವಾಗಿ ಮನುಷ್ಯರನ್ನು ಮನುಷ್ಯರಂತೆ ಕಾಣುವ ಮೂಲಕ ಶಾಂತಿ ಹಾಗೂ ಪ್ರೀತಿಯಿಂದ ಬದುಕುಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಜೈನಧರ್ಮದ ಕೊಡುಗೆ ಅಪಾರವಾದುದು. ನಮ್ಮ ಮುಂದಿನ ಯುವ ಪೀಳಿಗೆಗೆ ಜೈನಧರ್ಮ ಮತ್ತು ಜೈನ ಸಾಹಿತ್ಯದ ಮಹತ್ವ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.ಹರಿಯಬ್ಬೆ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಟಿ.ತಿಪ್ಪೇಸ್ವಾಮಿ ಉಪನ್ಯಾಸ ನೀಡಿ, ವಿಶ್ವ ಕಲ್ಯಾಣ ಹಾಗೂ ವಿಶ್ವ ಶಾಂತಿಗೆ ಇಂದು ಜೈನಧರ್ಮದ ತತ್ವಗಳ ಪಾಲನೆ ಅತ್ಯವಶ್ಯಕವಾಗಿದೆ. ಇಂದಿನ ಯುದ್ಧ, ಕಲಹ, ಪೀಡೆ, ಹಿಂಸೆ ಇವುಗಳ ನಡುವೆ ಅಹಿಂಸೆ ಬೋಧಿಸಿದ್ದು ಜೈನಧರ್ಮವಾಗಿದೆ. ಮಹಾತ್ಮಾ ಗಾಂಧೀಜಿಯವರು ಭಗವಾನ್ ಮಹಾವೀರರ ಮೌಲ್ಯಗಳನ್ನಿಟ್ಟುಕೊಂಡು ದೇಶಕ್ಕೆ ಸ್ವಾತಂತ್ಯ ತಂದುಕೊಟ್ಟಿದ್ದಾರೆ. ಸತ್ಯ, ಅಹಿಂಸೆ, ಅಪರಿಗ್ರಹ, ಬ್ರಹ್ಮಚರ್ಯೆ ಎಂಬ ಐದು ತತ್ವಗಳು ಸರ್ವಕಾಲಿಕವಾಗಿದ್ದು, ಪ್ರಚಂಚಕ್ಕೆ ಅತ್ಯವಶ್ಯಕವಾಗಿದೆ ಎಂದರು.
ಬೌದ್ಧಧರ್ಮದಂತೆ ಜೈನಧರ್ಮದ ತತ್ವಗಳು ವಿಶ್ವದಾದ್ಯಂತ ವ್ಯಾಪಿಸಬೇಕು. ಜೈನಧರ್ಮದ ಕವಿಗಳು ಜ್ಯೋತಿಷ್ಯ, ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ಸಾಹಿತ್ಯ ಗ್ರಂಥಗಳು, ಗದ್ಯ ಕೃತಿಗಳು ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಅಹಿಂಸೆಯೇ ಪರಮ ಧರ್ಮ ಎಂಬುವುದು ಭಗವಾನ್ ಮಹಾವೀರರ ಸಾರ್ವಕಾಲಿಕ ಸತ್ಯ ಸಂದೇಶವಾಗಿದ್ದು, ಅಹಿಂಸಾ ತತ್ವ ಅಳವಡಿಸಿಕೊಂಡರೆ ಉತ್ತಮ ಜೀವನ ಸಾಗಿಸಬಹುದಾಗಿದೆ ಎಂದರು.
ಜೈನ್ ಸಂಘದ ವಸ್ತಿಮಲ್ ಮಾತನಾಡಿ, ಮಹಾವೀರರು ಸರಳ ಬೋಧನೆ “ಜಿಯೋ ಜೀನೇದೋ” ಇದರ ಅರ್ಥ ನೀವು ಬದುಕಿ ಇತರರಿಗೂ ಬದುಕಲು ಬಿಡಿ ಎಂಬುದಾಗಿದೆ. ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯಗಳನ್ನು ಜಯಿಸಿದರೆ ಮುಕ್ತಿ ಪಡೆಯಬಹುದಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಡಾ.ಕೆ.ರಮೇಶ್ ಅವರ ಕನ್ನಡ ಜೈನ ಹಾಡುಗಳು ಸಾಂಸ್ಕೃತಿಕ ಅಧ್ಯಯನ ಹಾಗೂ ಡಾ. ಕಣುಮಪ್ಪ ಅವರ ಕನ್ನಡದಲ್ಲಿ ಧರ್ಮನಾಥ ಪುರಾಣ ತೌಲನಿಕ ಅಧ್ಯಯನ ಕುರಿತ ಪುಸ್ತಕಗಳನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಲೋಕರ್ಪಣೆಗೊಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ತಹಶೀಲ್ದಾರ್ ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜೈನ್ ಸಂಘದ ರಂಜಿತ್, ಅಶೋಕ್ ಕುಮಾರ್, ರಿಕಬ್ ಚಂದ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಡಾ.ಕೆ.ಮೋಹನ್ ಕುಮಾರ್, ನಿರೂಪಕ ನವೀನ್ ಮಸ್ಕಲ್ ಇದ್ದರು. ಆಯಿತೋಳ ಜಿ.ವಿ.ಮಾರುತೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.