ಬಂಟ್ವಾಳ: ಶ್ರೀ ರಾಮರನ್ನು ಭಾರತದೊಂದಿಗೆ ಸಮೀಕರಿಸಿ ಜಗತ್ತಿನ ಜನ ನೋಡುತ್ತಾರೆ. ರಾಜನಾಗಿ ಪ್ರಜೆಗಳನ್ನು ತಂದೆಯ ಸ್ಥಾನದಲ್ಲಿ ನಿಂತು ಪ್ರಜಾ ಪರಿಪಾಲಕನಾಗಿದ್ದ ಶ್ರೀರಾಮರನ್ನು‌ ಅನುಸರಿಸುವುದೆಂದರೆ ಮೋಕ್ಷ ಗಾಮಿಗಳಾಗುವುದು ಎಂದು ಆಧ್ಯಾತ್ಮಿಕ ಚಿಂತಕ, ಭಗವದ್ಗೀತಾ ವ್ಯಾಖ್ಯಾನಕಾರರಾದ ಡಾ.ಪಾವಗಡ ಪ್ರಕಾಶ ರಾವ್ ಹೇಳಿದರು.

ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಸಾಧನಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪಿತೃ ಪೂಜಕ, ಸಹೋದರ ಪ್ರೇಮ ಸೇರಿದಂತೆ ಹದಿನಾರು ಗುಣಗಳ ಶ್ರೀರಾಮ ದರ್ಶನವೇ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಶ್ರೀ ರಾಮರ ಅಧ್ಯಯನ ಮಾಡಿದರೆ ಭಾರತವನ್ನು ಅಧ್ಯಯನ ಮಾಡಿದಂತೆ ಎಂದು‌ ಅವರು ವಿವರಿಸಿದರು.

ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಭಾವದ ಪ್ರತಿಬಿಂಬ ಗೋಷ್ಠಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಎಂಬ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕ ಕರ್ನಾಟಕ ಕೇಂದ್ರೀಯ ವಿದ್ಯಾಲಯ ಕಲಬುರ್ಗಿಯ ಡಾ.ರೋಹಿಣಾಕ್ಷ ಶಿರ್ಲಾಲು ವಿಚಾರ ಮಂಡಿಸಿದರು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ‌ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರಲ್ಲಿಯೂ ರಾಷ್ಟ್ರಭಾವದ ಜಾಗರಣೆಯಾಗಬೇಕು. ನಮ್ಮತನ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಬಿಂಬಿಸಬೇಕು ಎಂದರು. ಪಾವಗಡ ಪ್ರಕಾಶ ರಾವ್ ಅವರನ್ನು ವಿದ್ಯಾರ್ಥಿಯೋರ್ವ ಮಾಡಿದ ಭಾವ ಚಿತ್ರದೊಂದಿಗೆ ಸನ್ಮಾನಿಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಶುಭಹಾರೈಸಿದರು.ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜು ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಡಾ.ಕಮಲ ಪ್ರಭಾಕರ ಭಟ್, ಕಲ್ಪನಾ ರಾನಡೆ ಉಪಸ್ಥಿತರಿದ್ದರು.


ಕನ್ನಡ ವಿಭಾಗ ಮುಖ್ಯಸ್ಥರೂ, ಉಪಪ್ರಾಂಶುಪಾಲ ಯತಿರಾಜ್ ಪೆರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗ ವಿದ್ಯಾರ್ಥಿನಿ ಪ್ರಣಮ್ಯ ವಂದಿಸಿದರು. ತನುಶ್ರೀ ನಿರೂಪಿಸಿದರು.