ಸಾರಾಂಶ
ಬಂಗಾರಪೇಟೆ : ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಲ್ಲಿ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಕಾರ್ಡುಗಳನ್ನು ಪತ್ತೆ ಹಚ್ಚಿದ್ದು ಅವುಗಳಿಗೆ ಕತ್ತರಿ ಹಾಕಲು ಆಹಾರ ಇಲಾಖೆ ಸದ್ದಿಲ್ಲದೆ ಮುಂದಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಉಚಿತವಾಗಿ ೫ ಕೆಜಿ ಅಕ್ಕಿಯನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನೀಡುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ೫ ಕೆಜಿ ಕೊಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ೫ ಕೆಜಿ ಅಕ್ಕಿ ಕೊಡಲು ಒಪ್ಪುತ್ತಿಲ್ಲವೆಂದು ಅಕ್ಕಿ ಬದಲು ಕೆಜಿಗೆ ೧೭೦ ರು.ಗಳನ್ನು ಕಾರ್ಡುದಾರರ ಖಾತೆಗೆ ಜಮಾ ಮಾಡುತ್ತಿದೆ.ಕಾರ್ಡ್‌ದಾರರಿಗೆ ಕೆವೈಸಿ ಕಡ್ಡಾಯ
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ವರದಾನವಾಗದ ಕಾರಣ ಈಗ ಕಾರ್ಡುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಒಂದಲ್ಲಾ ಒಂದು ಕಾರ್ಡುದಾರರ ಲೋಪಗಳನ್ನು ಪತ್ತೆ ಮಾಡಲು ಇಲಾಖೆ ಮುಂದಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಲ್ಲಿರುವ ಸದಸ್ಯರು ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು ತಪ್ಪಿದರೆ ಅವರುಗಳ ಹೆಸರುಗಳನ್ನು ಕಾರ್ಡಿನಿಂದ ಕೈಬಿಡುವ ಬಗ್ಗೆ ತಿಳಿಸಿ ಇದಕ್ಕೆ ಆಗಸ್ಟ್ ೩೧ರಂದು ಕೊನೆ ಗಡವು ನಿಗದಿಪಡಿಸಿತ್ತು.ಈಗ ಅನರ್ಹರನ್ನು ಪತ್ತೆ ಮಾಡಿ ಅವರುಗಳ ಹೆಸರನ್ನು ಕಾರ್ಡಿನಿಂದ ಕಡಿತಗೊಳಿಸಲು ಸದ್ದಿಲ್ಲದೆ ಮುಂದಾಗಿದೆ. ಈ ಹಿಂದೆ ಕಟುಂಬದ ವಾರ್ಷಿಕ ಆದಾಯವನ್ನು ೧.೨೦ಲಕ್ಷಕ್ಕಿಂತಲೂ ಕಡಿಮೆ ತೋರಿಸಿ ಬಿಪಿಎಲ್ ಎಎವೈ ಕಾರ್ಡು ಪಡೆದಿದ್ದು, ಈಗ ಅದ್ದಕ್ಕಿಂತಲೂ ಆದಾಯ ಹೆಚ್ಚಿರುವ ಕಾರ್ಡುದಾರರನ್ನು ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರೂ ಬಿಪಿಎಲ್ ಕಾರ್ಡನ್ನು ಹೊಂದಿರುವವರನ್ನು ಇಲಾಖೆ ಗುರುತಿಸಿದೆ.
ಬಿಪಿಎಲ್‌ನಿಂದ ಎಪಿಎಲ್‌ಗೆ
ವಾರ್ಷಿಕ ಆದಾಯ ದೃಢೀಕರಣ ಪತ್ರ ಸಲ್ಲಿಸದಿದ್ದರೆ ಅಂತವರನ್ನು ಅನರ್ಹರೆಂದು ಬಿಪಿಎಲ್ ನಿಂದ ಎಪಿಎಲ್‌ಗೆ ಬದಲಾಯಿಸಿದೆ. ಈ ಬಗ್ಗೆ ವಿವರ ಪಡೆಯಲು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಡುದಾರರ ಅನರ್ಹರ ಪಟ್ಟಿಯನ್ನು ಇಲಾಖೆ ರವಾನಿಸಿದೆ. ಇದರಿಂದ ಅನೇಕ ಬಡ ಕುಟುಂಬಗಳು ತಾಂತ್ರಿಕ ಕಾರಣದಿಂದ ವಾರ್ಷಿಕ ಆದಾಯ ಹೆಚ್ಚಿನ ಪತ್ರ ಪಡೆದವರು ಮತ್ತು ಆದಾಯ ಹೆಚ್ಚಿರುವ ಕಾರ್ಡಿನ ಸದಸ್ಯರು ಕುಟುಂಬದಿಂದ ಪ್ರತ್ಯೇಕವಾಗಿ ವಾಸವಾಗಿದ್ದರೂ ಸಹ ಈಗ ಒಬ್ಬರಿಂದ ಇತರೆ ಸದಸ್ಯರಿಗೆ ಅದು ಮಾರಕವಾಗಿ ಪರಿಣಮಿಸಿದೆ.
ಕಾರ್ಡ್ ರದ್ದಾಗುವ ಸಾಧ್ಯತೆ
ಸರ್ಕಾರ ಪಡಿತರ ಚೀಟಿಗಳನ್ನು ಕೊಡುವಾಗ ಎಲ್ಲ ದಾಖಲೆಗಳನ್ನು ಪಡೆದೇ ವಿತರಿಸುತ್ತದೆ. ಆದರೆ ಈಗ ಮತ್ತೆ ಆದಾಯ ಹೆಚ್ಚಿದೆ ತೆರೆಗೆ ಕಟ್ಟಲಾಗುತ್ತಿದೆ ಎಂದು ಸಬೂಬು ಹೇಳಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಹುನ್ನಾರ ಮಾಡುತ್ತಿರುವುದರಿಂದ ತಾಲೂಕಿನಿಂದಲೇ ಸಾವಿರಾರು ಕಾರ್ಡುಗಳು ರದ್ದಾಗುವ ಸಾಧ್ಯತೆ ಇದೆ.