ಜನರ ಆರೋಗ್ಯದ ಜತೆ ಆಹಾರ ಇಲಾಖೆ ಚೆಲ್ಲಾಟ

| Published : Jan 22 2025, 12:33 AM IST

ಸಾರಾಂಶ

ಪಡಿತರ ಫಲಾನುಭವಿಗಳಿಗೆ ಸರ್ಕಾರ ಉಚಿತವಾಗಿ ವಿತರಿಸುವ, ಆಹಾರ ಧಾನ್ಯಗಳು ನುಸಿ ಹಿಡಿದು ಸತ್ವ ರಹಿತವಾಗಿರುವ ಕಳಪೆ ಜೋಳವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿದ್ದಾರೆ.

ಹೂವಿನಹಡಗಲಿ: ಪಡಿತರ ಫಲಾನುಭವಿಗಳಿಗೆ ಸರ್ಕಾರ ಉಚಿತವಾಗಿ ವಿತರಿಸುವ, ಆಹಾರ ಧಾನ್ಯಗಳು ನುಸಿ ಹಿಡಿದು ಸತ್ವ ರಹಿತವಾಗಿರುವ ಕಳಪೆ ಜೋಳವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿದ್ದಾರೆ.

ಕಳೆದ 2 ದಿನಗಳ ಹಿಂದೆ ಬಳ್ಳಾರಿಯಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು, ಬಳ್ಳಾರಿಯ ಎಪಿಎಂಸಿ ಬಳಿ ಇರುವ ಕರ್ನಾಟಕ ಉಗ್ರಾಣ ನಿಗಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ನುಸಿ ಹಿಡಿದು ಸಂಪೂರ್ಣ ಗುಣಮಟ್ಟ ಕಳೆದುಕೊಂಡು, ತಿನ್ನಲು ಯೋಗ್ಯವಲ್ಲದ ಬಿಳಿ ಜೋಳದ ಚೀಲಗಳ ನೋಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬಳ್ಳಾರಿ ಕರ್ನಾಟಕ ಉಗ್ರಾಣ ನಿಗಮದಲ್ಲಿ ಸಂಗ್ರಹಿಸಿದ್ದ ಜೋಳವನ್ನೇ ಪಡಿತರ ವಿತರಣೆಗಾಗಿ ಬಳ್ಳಾರಿ, ವಿಜಯನಗರ ಮತ್ತು ಹಾವೇರಿ ಜಿಲ್ಲೆಯ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಗಳಿಗೆ ಪೂರೈಕೆಯಾಗಿವೆ. ಕಳೆದ 3-4 ದಿನಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಫಲಾನುಭವಿಗಳಿಗೆ ಕಳಪೆ ಜೋಳವನ್ನು ವಿತರಣೆ ಮಾಡಲಾಗುತ್ತಿದೆ.

ತಾಲೂಕಿನಲ್ಲಿರುವ 53 ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ, ಬಳ್ಳಾರಿಯ ಕರ್ನಾಟಕ ಉಗ್ರಾಣ ನಿಮಗದಿಂದ 4500 ಕ್ವಿಂಟಲ್‌ ಜೋಳ ಪೂರೈಕೆಯಾಗಿದೆ. ಉಳಿದಂತೆ ಇನ್ನು 1 ಸಾವಿರ ಕ್ವಿಂಟಲ್‌ ಪೂರೈಕೆ ಆಗಬೇಕಿದೆ. ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮೂಲಕ ಕಳಪೆ ಜೋಳವನ್ನೇ ಜನರಿಗೆ ವಿತರಿಸುತ್ತಿದ್ದಾರೆ.

ನ್ಯಾಯ ಬೆಲೆ ಅಂಗಡಿಗಳಿಗೆ ಪೂರೈಕೆಯಾಗಿರುವ ಜೋಳಕ್ಕೆ ತೇವಾಂಶ ಹೆಚ್ಚಾಗಿ ಕೈಯಲ್ಲಿ ಹಿಡಿದಾಗ ಹಿಟ್ಟುಹಿಟ್ಟಾಗಿದೆ. ಮುಗ್ಗುಸಾಗಿರುವ ಈ ಜೋಳವನ್ನು ನಾವು ಹೇಗೆ ತಿನ್ನಬೇಕು? ದನವೂ ಮುಂದೆ ಇಟ್ಟರೇ ತಿನ್ನುವುದಿಲ್ಲ, ಉಚಿತವಾಗಿ ಕೊಡುತ್ತಾರೆಂದು ಹೀಗೆ ಬೇಕಾಬಿಟ್ಟಿಯಾಗಿ ನೀಡಿದರೆ ಹೇಗೆ? ಈ ಆಹಾರ ಇಲಾಖೆ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆಯೇ? ಗುಣಮಟ್ಟವನ್ನು ಪರೀಕ್ಷೆ ಮಾಡಬೇಕಾದ ಆಹಾರ ಇಲಾಖೆಯೇ ಕಳಪೆ ಆಹಾರ ಧಾನ್ಯ ನೀಡಿದರೇ ಹೇಗೆ? ಹೀಗೆಂದು ಪಡಿತರ ಫಲಾನುಭವಿಗಳು ಪ್ರಶ್ನೆ ಮಾಡುತ್ತಾರೆ.ಮೇಲಧಿಕಾರಿಗಳ ಗಮನಕ್ಕೆ

ಬಳ್ಳಾರಿಯ ಕರ್ನಾಟಕ ಉಗ್ರಾಣ ನಿಮಗದಿಂದ ತಾಲೂಕಿನ 53 ನ್ಯಾಯ ಬೆಲೆ ಅಂಗಡಿಗಳಿಗೆ 4500 ಕ್ವಿಂಟಲ್‌ ಜೋಳ ಪೂರೈಕೆಯಾಗಿದೆ. 1 ಸಾವಿರ ಕ್ವಿಂಟಲ್‌ ಜೋಳ ಬರಬೇಕಿದೆ. ಕಳಪೆಯಾಗಿರುವ ಕುರಿತು ನಾವು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ.

ಬುದ್ಧ, ಕೆಎಸ್‌ಎಫ್‌ಸಿ ಉಗ್ರಾಣ ವ್ಯವಸ್ಥಾಪಕರು, ಹೂವಿನಹಡಗಲಿ.ಬದಲಾವಣೆ

ಕಳಪೆಯಾಗಿರುವ ಜೋಳವನ್ನು ನ್ಯಾಯ ಬೆಲೆ ಅಂಗಡಿಯವರು ಜನರಿಗೆ ವಿತರಣೆ ಮಾಡಬಾರದು. ಅಂತಹ ಜೋಳದ ಚೀಲಗಳು ಕಂಡುಬಂದಲ್ಲಿ ಆಯಾ ಉಗ್ರಾಣದಲ್ಲಿ ಬದಲಾವಣೆ ಮಾಡಲು ತಿಳಿಸುತ್ತೇವೆ.

ರಿಯಾಜ್‌, ಆಹಾರ ಇಲಾಖೆ ಜಿಲ್ಲಾ ಉಪ ನಿರ್ದೇಶಕರು, ವಿಜಯನಗರ.