ಸಾರಾಂಶ
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಬೆಂಗಳೂರಿನ ಅರಿಶಿನಕುಂಟೆ ರಾಜಮ್ಮ ಮತ್ತು ರಾಮಕೃಷ್ಣಪ್ಪ ದಂಪತಿ ಹಾಗೂ ಶ್ರೀಕಾಲಭೈರವೇಶ್ವರ ಜಾತ್ರಾ ಮಹೋತ್ಸವ ಅನ್ನ ಸಂತರ್ಪಣಾ ಸೇವಾ ಟ್ರಸ್ಟ್ ವತಿಯಿಂದ ಶ್ರೀಮಠದಲ್ಲಿ ನಡೆದ ದಾಸೋಹಕ್ಕೆ ಶ್ರೀಗಳು ಚಾಲನೆ ನೀಡಿದರು.
ಕನ್ನಡಪ್ರಭವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಬೆಂಗಳೂರಿನ ಅರಿಶಿನಕುಂಟೆ ರಾಜಮ್ಮ ಮತ್ತು ರಾಮಕೃಷ್ಣಪ್ಪ ದಂಪತಿ ಹಾಗೂ ಶ್ರೀಕಾಲಭೈರವೇಶ್ವರ ಜಾತ್ರಾ ಮಹೋತ್ಸವ ಅನ್ನ ಸಂತರ್ಪಣಾ ಸೇವಾ ಟ್ರಸ್ಟ್ ವತಿಯಿಂದ ಶ್ರೀಮಠದಲ್ಲಿ ನಡೆದ ದಾಸೋಹಕ್ಕೆ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳು ಭಕ್ತರಿಗೆ ಪ್ರಸಾದ ಬಡಿಸುವ ಮೂಲಕ ಗುರುವಾರ ಚಾಲನೆ ನೀಡಿದರು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಹಾಗೂ ಭಕ್ತರು ಇದ್ದರು.
ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಲಕ್ಷಾಂತರ ಮಂದಿ ಭಕ್ತರು ಸೇರುವುದು ಬಹುವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಶುಕ್ರವಾರ ಮುಂಜಾನೆ 4 ಗಂಟೆ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯುವ ಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವವನ್ನು ನೋಡಿ ಕಣ್ತುಂಬಿಕೊಳ್ಳಲು ಗುರುವಾರ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹವೇ ಶ್ರೀಮಠಕ್ಕೆ ಹರಿದುಬರುತ್ತಿತ್ತು.ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹತ್ತಾರು ಸ್ಥಳಗಳಲ್ಲಿ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಯಿತು. ಈ ದಾಸೋಹ ಗುರುವಾರ ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ನಡೆಯಿತು. ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬಿಜಿಎಸ್ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಪ್ರಕಾಶನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು, ಗಣ್ಯರು ಇದ್ದರು.