ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ ಗಮನ ಸೆಳೆದ ಆಹಾರ ಮೇಳ

| Published : Nov 26 2024, 12:45 AM IST

ಸಾರಾಂಶ

ಪ್ರಪಂಚ ಎಷ್ಟೇ ಬದಲಾಗಿದೆ ಎಂದು ನಾವು ಹೇಳಿದರೂ ಭಾರತದಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಮಾತ್ರ ಈವರೆಗೆ ಉಳಿಸಿಕೊಂಡಿದೆ.

ಬಳ್ಳಾರಿ; ನಗರದ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದ ವಾಣಿಜ್ಯ ವಿಭಾಗದಿಂದ "ಆಸ್ವಾದ " ಶೀರ್ಷಿಕೆಯಡಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.ಮೇಳಕ್ಕೆ ಚಾಲನೆ ನೀಡಿದ ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರು ಬಸವರಾಜ್ ಹಾಗೂ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಭಾರತದಷ್ಟು ವೈವಿಧ್ಯಮಯ ಆಹಾರ ಪದ್ಧತಿ ಎನ್ನೆಲ್ಲೂ ಇಲ್ಲ. ಪ್ರತಿ ನೂರು ಕಿಲೋ ಮೀಟರ್‌ಗೆ ಭಾಷೆ ಬದಲಾದಂತೆ ಆಹಾರ ಕ್ರಮ ಪದ್ಧತಿಯೂ ಬದಲಾಗುತ್ತದೆ. ಆಹಾರ ಮೇಳ ಏರ್ಪಡಿಸುವುದರಿಂದ ವಿವಿಧ ಬಗೆಯ ಆಹಾರಪದ್ಧತಿಯನ್ನು ಒಂದೇ ಕಡೆ ಸವಿಯಲು ಅವಕಾಶವಾಗುತ್ತದೆ. ಮುಖ್ಯವಾಗಿ ಮನೆ ಅಡುಗೆಯ ಮಹತ್ವ ತಿಳಿಸಲು ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಪ್ರಪಂಚ ಎಷ್ಟೇ ಬದಲಾಗಿದೆ ಎಂದು ನಾವು ಹೇಳಿದರೂ ಭಾರತದಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಮಾತ್ರ ಈವರೆಗೆ ಉಳಿಸಿಕೊಂಡಿದೆ. ಈ ಪೈಕಿ ದಕ್ಷಿಣ ಭಾರತದ ಆಹಾರ ಶೈಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ವಿದ್ಯಾರ್ಥಿಗಳು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ನಮ್ಮ ಆಹಾರ ಪದ್ಧತಿಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಯಸಲು ಆಹಾರ ಮೇಳ ಹೆಚ್ಚು ಸಹಕಾರಿ ಎಂದು ತಿಳಿಸಿದರು. ಜೀವನದಲ್ಲಿ ಆಹಾರಶೈಲಿ ಬಹಳ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯದ ಅರಿವಿರಬೇಕು. ಆರೋಗ್ಯ ಮೇಳಗಳು ಆಹಾರಶೈಲಿ ಹಾಗೂ ಕುಟುಂಬ ಸದಸ್ಯರ ಆರೋಗ್ಯದಲ್ಲಿ ಮಹಿಳೆಯರ ಪಾತ್ರ ಕುರಿತು ತಿಳಿಸಿಕೊಡುವಂತಾಗಬೇಕು. ಸಮತೋಲಿತ ಆಹಾರದ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರಲ್ಲದೆ, ಆಹಾರ ಮೇಳ ಆಯೋಜನೆಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಪ್ರೇರೇಪಿಸಿದ ಉಪನ್ಯಾಸಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಒಟ್ಟು 20 ತೆರೆದ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ವಿದ್ಯಾರ್ಥಿಗಳು ಮನೆಯಿಂದ ತಾವೇ ತಯಾರಿಸಿದ ವೈವಿಧ್ಯಮಯ ತಿಂಡಿ ತಿನಿಸುಗಳು ಹಾಗೂ ಪಾನೀಯಗಳನ್ನು ಮೇಳದಲ್ಲಿ ಇರಿಸಲಾಗಿತ್ತು. ಮೇಳಕ್ಕೆ ಆಗಮಿಸಿದ್ದ ಉಪನ್ಯಾಸಕರು, ಸಾರ್ವಜನಿಕರು ಹಾಗೂ ಪೋಷಕರಿಗೆ 20 ರು.ಗೆ ಮೀರದಂತೆ ವ್ಯಾಪಾರ ಮಾಡುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದರು.

ಡಾ.ಎಂ.ಪಿ. ಗಾಯತ್ರಿ, ನಾಗರತ್ನ ನಿರ್ಣಾಯಕರಾಗಿದ್ದರು. ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಎಂ. ಮರಿದೇವಯ್ಯ ಅವರು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲೆ ಎಚ್.ರತ್ನಾ, ವಾಣಿಜ್ಯ ವಿಭಾಗದ ಡಾ.ಗವಿಸಿದ್ಧಪ್ಪ ಗದಗ, ಡಾ.ಗಂಗಾಧರ, ಡಾ.ಕೆ. ಅನುಪಮಾ, ಕೆ.ಮಮತಾ, ಐ.ಸೌಮ್ಯ ಭಾಗವಹಿಸಿದ್ದರು. ಕೊನೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಎಂ. ಮರಿದೇವಯ್ಯ ಹಾಗೂ ಎಚ್.ರತ್ನಾ ಮೇಳದಲ್ಲಿ ಭಾಗವಹಿಸಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.

ಬಿಕಾಂ ಮೂರನೇ ಸೆಮಿಸ್ಟರ್‌ನ ಅಭಿರುಚಿ ಮಳಿಗೆಯ ವಿದ್ಯಾರ್ಥಿನಿಯರ ತಂಡ ಮೊದಲ ಬಹುಮಾನ, ಮೊದಲ ರುಚಿ ತಂಡ ಎರಡನೇ ಹಾಗೂ ಟೇಸ್ಟಿ ಬೈಟ್ಸ್‌ ತಂಡ ಮೂರನೇ ಬಹುಮಾನ ಪಡೆದವು.