ಬೀದಿ ನಾಯಿಗಳಿಗೆ ಆಹಾರನೀಡುವ ‘ಶ್ವಾನ ಉತ್ಸವ’

| Published : Oct 18 2024, 12:15 AM IST

ಸಾರಾಂಶ

ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿ ಶ್ವಾನ ಮಹೋತ್ಸವಕ್ಕೆ ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಯಶಸ್ವಿಯಾದರೆ, ಎಲ್ಲ ವಾರ್ಡ್‌ನಲ್ಲಿ ಆಯೋಜಿಸಲಾಗುವುದು ಎಂದು ಬಿಬಿಎಂಪಿಯ ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.

ಗುರುವಾರ ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿ ಶ್ವಾನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯಡಿ ಪೌರಕಾರ್ಮಿಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು, ಪ್ರಾಣಿ ಪ್ರಿಯರು, ಪ್ರಾಣಿ ಪಾಲಕರು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಹೋಟೆಲ್, ರೆಸ್ಟೋರೆಂಟ್ ಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತದೆ. ಸಮುದಾಯದಿಂದ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಗುರುತಿಸಿದ ನಿರ್ದಿಷ್ಟ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತದೆ. ಆಹಾರ ಹಾಕಲು ಬೌಲ್‌, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಾಮಫಲಕ ಹಾಕಲಾಗುತ್ತದೆ. ಒಂದು ತಿಂಗಳು ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು. ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ-ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಏನಾದರೂ ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಪಾಲಿಕೆಯ ಎಲ್ಲ ಕಡೆ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮಲ್ಲಿ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡಲು ಒಪ್ಪಿಕೊಂಡಿದ್ದಾರೆ. ಮಸಾಲೆ, ಎಣ್ಣೆ ಸೇರಿದಂತೆ ನಾಯಿಗಳಿಗೆ ತೊಂದರೆ ಉಂಟಾಗುವ ಅಂಶ ಇರುವ ಆಹಾರವನ್ನು ನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕ ಡಾ। ಚಂದ್ರಯ್ಯ, ಸಹಾಯಕ ನಿರ್ದೇಶಕ ಡಾ। ಮಲ್ಲಪ್ಪ ಬಜಂತ್ರಿ, ಸಹವರ್ತೀನ್‌ ಉಪಸ್ಥಿತರಿದ್ದರು.