ಅನ್ನ ಹಾಗೂ ಅಮ್ಮ ಎರಡಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ತಂದೆ-ತಾಯಿಗಳಿಗಿಂತ ಹೆಚ್ಚಿನದನ್ನು ಅನ್ನ ನಮಗೆ ಮಾಡುತ್ತದೆ.
ಅನ್ನಕ್ಕೆ ಪರಮಾತ್ಮನ ಅನೇಕ ಲಕ್ಷಣಗಳಿವೆ, ಅನ್ನ ಕೇವಲ ಆಹಾರವಲ್ಲ, ಅದು ಪರಮಾತ್ಮನ ಸ್ವರೂಪ
ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆಕನ್ನಡಪ್ರಭ ವಾರ್ತೆ ಗೋಕರ್ಣ
ಅನ್ನ ಹಾಗೂ ಅಮ್ಮ ಎರಡಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ತಂದೆ-ತಾಯಿಗಳಿಗಿಂತ ಹೆಚ್ಚಿನದನ್ನು ಅನ್ನ ನಮಗೆ ಮಾಡುತ್ತದೆ. ತಂದೆ-ತಾಯಿ ಹೊರಗಿನಿಂದ ಪೋಷಿಸಬಹುದು. ಆದರೆ ದೇಹದ ಒಳಗೂ ಹೋಗಿ ನಮ್ಮನ್ನು ಪೋಷಿಸುವ ಶಕ್ತಿ ಆಹಾರಕ್ಕೆ ಮಾತ್ರವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಸೋಮವಾರ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಗಂಗೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಅದು ಕೇವಲ ಎಚ್‌ಟುಒ ಅನಿಸುತ್ತದೆ. ಅದಕ್ಕೂ ಬೇರೆ ನೀರಿಗೂ ವ್ಯತ್ಯಾಸವಿಲ್ಲ ಎನಿಸಬಹುದು. ಆದರೆ ಗಂಗೆ ಕೇವಲ ಅಷ್ಟೇ ಅಲ್ಲ. ಸೂಕ್ಷ್ಮ ದೃಷ್ಟಿಗೆ ಗಂಗಾ ನದಿಯು ಗಂಗಾ ಮಾತೆಯಾಗಿ ಕಾಣುತ್ತಾಳೆ. ರಾಮನು ಮನುಷ್ಯನಾಗಿದ್ದ. ಆದರೆ ರಾಮ ಮನುಷ್ಯ ಮಾತ್ರವೇ ಆಗಿರಲಿಲ್ಲ ಎಂಬುದನ್ನು ನಾವು ಗಮನಿಸಬಹುದು. ಹಾಗೆಯೇ ಸ್ಥೂಲ ದೃಷ್ಟಿಯಲ್ಲಿ ಆಹಾರವು ಕೇವಲ ಹೊಟ್ಟೆ ತುಂಬಿಸುವ ಊಟವಾದರೆ, ಸೂಕ್ಷ್ಮ ದೃಷ್ಟಿಗೆ ಆಹಾರ ಎಂಬುದು ಪರಮಾತ್ಮನ ಸ್ವರೂಪವಾಗಿದ್ದು, ಅನ್ನಪೂರ್ಣೇಶ್ವರಿಯೇ ಆಗಿದ್ದಾಳೆ ಎಂದು ಅನ್ನದ ಮಹತ್ವವನ್ನು ವಿವರಿಸಿದರು.
ಅಮ್ಮ ಹಾಗೂ ಅನ್ನಕ್ಕೆ ಹೆಚ್ಚು ವ್ಯತ್ಯಾಸವಿಲ್ಲ. ಹೆತ್ತ ತಾಯಿಯನ್ನು ಗೌರವಿಸುವಂತೆ, ಅನ್ನವನ್ನೂ ಗೌರವಿಸಬೇಕು. ಆಹಾರ ನಿರ್ಜೀವವಾದ ಕೇವಲ ಭೌತಿಕ ವಸ್ತುವಲ್ಲ. ನಾವು ಯಾವ ದೃಷ್ಟಿಯಿಂದ ನೋಡುತ್ತೇವೆಯೋ, ಅದೇ ರೀತಿಯ ಪರಿಣಾಮವನ್ನು ನೀಡುತ್ತದೆ. ಆಹಾರವನ್ನು ಫುಡ್ ಎಂದು ನೋಡಿದಾಗ ಅದು ಅಷ್ಟೇ ಆಗಿರುತ್ತದೆ. ಅದೇ ಅನ್ನಪೂರ್ಣೇಶ್ವರಿ, ಬ್ರಹ್ಮ ಸ್ವರೂಪ ಎಂದು ನೋಡಿದಾಗ ಅದು ನಮ್ಮಲ್ಲಿ ಅದ್ಭುತ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಅನ್ನಕ್ಕಿರುವ ದೈವತ್ವ ವಿವರಿಸಿದರು.ಸಂಪತ್ತಿನ ವಿಚಾರ ಬಂದರೆ ಜನರು ಸಾಕು ಸಾಕು ಎಂದು ಹೇಳುವುದೇ ಇಲ್ಲ. ಆದರೆ ಆಹಾರದ ವಿಷಯ ಬಂದಾಗ ಒಂದು ಹಂತದ ನಂತರ ಯಾರೇ ಆದರೂ ಸಾಕು ಎನ್ನಲೇಬೇಕು. ಯಾವ ಸಂಪತ್ತೂ ನೀಡದ ಸಂತೃಪ್ತಿಯನ್ನು ಆಹಾರ ನೀಡುತ್ತದೆ. ನೆಮ್ಮದಿ ನೀಡುವುದು ದೇವರ ಲಕ್ಷಣವಾಗಿದ್ದು, ಅನ್ನಕ್ಕೆ ಪರಮಾತ್ಮನ ಅನೇಕ ಲಕ್ಷಣಗಳಿವೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ, ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ, ಶಿವಮೊಗ್ಗ ಹವ್ಯಕ ಸಂಘ ಅಧ್ಯಕ್ಷ ಪೂರ್ಣಾನಂದ ಶ್ರೀಗಳ ಆಶೀರ್ವಾದ ಪಡೆದರು. ಲಕ್ಷ್ಮೀನಾರಾಯಣ ಪಕಳಕುಂಜ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ವೇ.ಮೂ. ಸುಬ್ರಾಯ ಭಟ್ಟ ಅಗ್ನಿಹೋತ್ರಿ, ವೇ.ಮೂ. ಮಂಜುನಾಥ ಭಟ್ಟ ಜಲಗದ್ದೆ, ದಿನಪ್ರಧಾನರಾಗಿ ಡಾ. ಪುರುಷೋತ್ತಮ ಭಟ್ ದಂಪತಿ ಉಪಸ್ಥಿತರಿದ್ದರು.ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಲುತ್ತಿರುವ ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಭಕ್ತರು ಸಮರ್ಪಿಸುವ ಫಲವು ಅವರ ಭಕ್ತಿಯ ಪ್ರತೀಕವಾದರೆ, ಗುರುಗಳು ಅನುಗ್ರಹಿಸುವ ಮಂತ್ರಾಕ್ಷತೆಯು ಗುರುಪರಂಪರೆಯ ಆಶೀರ್ವಾದದ ಪ್ರತೀಕವಾಗಿದೆ. ಗುರುಪೀಠದ ಆಶೀರ್ವಾದದಿಂದ ಅಮ್ಮಕೊಡವ ಸಮಾಜಕ್ಕೆ ಒಳಿತಾಗಲಿ ಎಂದು ಹಾರೈಸಿದರು.ಅಮ್ಮಕೊಡವ ಸಮಾಜ ಅಧ್ಯಕ್ಷರಾದ ಬಾಣಂಡ ಎನ್. ಪ್ರಥ್ಯು, ಬಿ.ಎಸ್. ರಘು, ಬಿ.ಎಸ್. ಪ್ರವೀಣ ಸೇರಿದಂತೆ ನೂರಾರು ಗುರುಬಂಧುಗಳು ಉಪಸ್ಥಿತರಿದ್ದರು.