ವಿಷಾಹಾರ ಪ್ರಕರಣ ಹಿನ್ನೆಲೆ: ವಸತಿ ನಿಲಯಗಳಿಗೆ ಕಡ್ಡಾಯ ಮಾರ್ಗಸೂಚಿ

| Published : Feb 13 2024, 12:50 AM IST

ವಿಷಾಹಾರ ಪ್ರಕರಣ ಹಿನ್ನೆಲೆ: ವಸತಿ ನಿಲಯಗಳಿಗೆ ಕಡ್ಡಾಯ ಮಾರ್ಗಸೂಚಿ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯ ಎಲ್ಲ ವಸತಿ ನಿಲಯಗಳಿಗೆ ಕಡ್ಡಾಯ ಮಾರ್ಗಸೂಚಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದೆ. ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್‌ ಮಾಲೀಕರು ಆಹಾರ ಸಂರಕ್ಷಣೆ ಗುಣಮಟ್ಟ ಮತ್ತು ಪ್ರಾಧಿಕಾರದಿಂದ ನೋದಣಿ ಅಥವಾ ಲೈಸನ್ಸ್ ಪಡೆದುಕೊಳ್ಳಬೇಕು. ಅಡುಗೆ ಕೋಣೆ ಹೊಂದಿರುವ ಹಾಸ್ಟೆಲ್, ಪಿ.ಜಿ.ಗಳು ಕಡ್ಡಾಯವಾಗಿ ಲೈಸನ್ಸ್ ಪಡೆದುಕೊಳ್ಳಬೇಕು ಎಂದು ಆರೋಗ್ಯಾಧಿಕಾರಿ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ವಿಷಾಹಾರದಿಂದ ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಸತಿ ನಿಲಯಗಳಿಗೆ ಕಡ್ಡಾಯ ಮಾರ್ಗಸೂಚಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದೆ.ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ, ವಸತಿ ನಿಲಯಗಳು ಶುಚಿತ್ವದೊಂದಿಗೆ ಕೆಲವೊಂದು ಕಡ್ಡಾಯ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.25 ನಿಯಮಗಳು: ಹಾಸ್ಟೆಲ್‌ಗಳಲ್ಲಿ ನೀರಿನ ಮೂಲಗಳನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಸ್ಚಚ್ಛಗೊಳಿಸುವುದು, ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಬಾರದು, ಅಡುಗೆ ಸಿಬ್ಬಂದಿ ಸ್ವಚ್ಛತೆ ಕಾಯ್ದುಕೊಳ್ಳುವುದು, 6 ತಿಂಗಳಿಗೊಮ್ಮೆ ಅವರ ಆರೋಗ್ಯ ತಪಾಸಣೆ, ಅವಘಡ ಆದರೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಿಸುವುದು, ಅಡುಗೆಗೆ ಬಳಸುವ ಪಾತ್ರೆಗಳನ್ನು ಕಡ್ಡಾಯವಾಗಿ ಬಿಸಿನೀರಲ್ಲಿ ಸ್ವಚ್ಛಗೊಳಿಸುವುದು, ಆಹಾರ ಪದಾರ್ಥಗಳನ್ನು ಶುಚಿಗೊಳಿಸುವುದು, ಹಸಿ ಪದಾರ್ಥ ಕೆಡದಂತೆ ಕ್ರಮ ವಹಿಸುವುದು ಇತ್ಯಾದಿ 25 ಅಂಶಗಳ ನಿಯಮಗಳನ್ನು ಪಾಲನೆ ಮಾಡಲು ಎಲ್ಲ ಹಾಸ್ಟೆಲ್‌ಗಳಿಗೆ ಸೂಚಿಸಲಾಗಿದೆ. ಮುಂದಿನ 2 ದಿನದಲ್ಲಿ ಅವರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಮರಳಿ ತಿಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿರುವ ಎಲ್ಲ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿಗಳು ನೀರನ್ನು 3 ತಿಂಗಳಿಗೊಮ್ಮೆ ಪರಿಶೀಲಿಸಲಿದ್ದಾರೆ ಎಂದರು.ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್‌ ಮಾಲೀಕರು ಆಹಾರ ಸಂರಕ್ಷಣೆ ಗುಣಮಟ್ಟ ಮತ್ತು ಪ್ರಾಧಿಕಾರದಿಂದ ನೋದಣಿ ಅಥವಾ ಲೈಸನ್ಸ್ ಪಡೆದುಕೊಳ್ಳಬೇಕು. ಅಡುಗೆ ಕೋಣೆ ಹೊಂದಿರುವ ಹಾಸ್ಟೆಲ್, ಪಿ.ಜಿ.ಗಳು ಕಡ್ಡಾಯವಾಗಿ ಲೈಸನ್ಸ್ ಪಡೆದುಕೊಳ್ಳಬೇಕು ಎಂದು ಆರೋಗ್ಯಾಧಿಕಾರಿ ಸೂಚಿಸಿದರು.

----------ಇಂದು ಹಾಸ್ಟೆಲ್ ಪಾಲಕರ ಸಭೆಫೆ.13ರಂದು ಎಲ್ಲ ಹಾಸ್ಟೆಲ್, ಪಿ.ಜಿ. ಮಾಲೀಕರ, ಹಿಂದುಳಿದ ಇಲಾಖೆಯ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ.

----------ವರದಿ ಬಳಿಕ ಕ್ರಮಇತ್ತೀಚೆಗೆ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಸಮೂಹ ಸಂಸ್ಥೆಯಲ್ಲಿ ಮತ್ತು ಅಥೆನಾ ಕಾಲೇಜ್ ಆಫ್ ನರ್ಸಿಂಗ್‌ನ ಕದ್ರಿ ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವನೆಯಿಂದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ಕುರಿತು ಪರೀಕ್ಷಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದರು.ಕಳೆದ ವರ್ಷ ಸಿಟಿ ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ ಪ್ರಕರಣದಲ್ಲಿ ಕೇಸ್‌ ದಾಖಲಾಗಿದ್ದು, ಈಗ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ತಿಳಿಸಿದರು.