ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಇತ್ತೀಚೆಗೆ ಜಿಲ್ಲೆಯ ಕೆಲವೊಂದು ಖಾಸಗಿ ನರ್ಸಿಂಗ್ ಕಾಲೇಜುಗಳ ಹಾಸ್ಟೆಲ್‍ಗಳಲ್ಲಿ ವಾಂತಿಭೇದಿ ಪ್ರಕರಣಗಳು ಕಂಡುಬರುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.ಈ ಬಗ್ಗೆ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್, ಅಲೈಡ್ ಹೆಲ್ತ್ ಸಯನ್ಸ್, ಎಂಜಿನಿಯರಿಂಗ್ ಕಾಲೇಜುಗಳಿಗೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಅವರು ಸುತ್ತೋಲೆ ಹೊರಡಿಸಿದ್ದಾರೆ.ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಮತ್ತು ಸುರಕ್ಷಿತ ಆಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳಲ್ಲಿ ಪ್ರಾಂಶುಪಾಲರು/ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಸಮೂಹದ ಪ್ರತಿನಿಧಿಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು, ಸಮಿತಿಯ ವತಿಯಿಂದ ಪ್ರತಿ ತಿಂಗಳು ಸಭೆ ನಡೆಸಬೇಕು ಮತ್ತು ಸಭೆಯ ನಡವಳಿ ಮತ್ತು ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ಆಯಾ ತಿಂಗಳಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಆದೇಶಿಸಿದರು.ಆರೋಗ್ಯ ಇಲಾಖೆ ವತಿಯಿಂದ ಹೊರಡಿಸಲಾಗಿರುವ ಸುತ್ತೋಲೆ ಅಂಶಗಳನ್ನು ಆಯಾ ಸಂಸ್ಥೆಯಲ್ಲಿ ರಚಿಸಲಾಗಿರುವ ಸಮಿತಿಯು ಚಾಚೂ ತಪ್ಪದೆ ಪಾಲಿಸುತ್ತಿರುವ ಬಗ್ಗೆ ಸಂಸ್ಥೆಯ ಮುಖ್ಯಸ್ಥರು ಅಫಿದವಿತ್ ಮಾಡಿ ಮೂರು ದಿನಗಳೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಸಲ್ಲಿಸಬೇಕು. ಅಪಿದವಿತ್‍ನಲ್ಲಿ ಆಯಾ ಶಿಕ್ಷಣ ಸಂಸ್ಥೆಯ ವಸತಿ ನಿಲಯಗಳಲ್ಲಿ ಪ್ರತಿದಿನ ಮತ್ತು ಪ್ರತಿವಾರ ಪರಿಶೀಲನೆ ಕೈಗೊಳ್ಳುವ ಸಂಬಂಧ ಕ್ರಿಯಾ ಯೋಜನೆ ತಯಾರಿಸಿ ಸಮಿತಿ ರಚಿಸಿ ನಿರಂತರ ಮೇಲ್ವಿಚಾರಣೆ ಮಾಡುತ್ತಿರುವ ಕುರಿತು ಕಡ್ಡಾಯವಾಗಿ ನಮೂದಿಸಬೇಕು ಎಂದರು.ಆರೋಗ್ಯ ಇಲಾಖೆಯ ಎಲ್ಲ ವಸತಿ ನಿಲಯಗಳನ್ನು ಪರಿಶೀಲಿಸಲು ಒಂದು ಪರಿಶೀಲನಾ ತಂಡ ರಚಿಸಬೇಕು. ತಂಡಗಳಲ್ಲಿ ನರ್ಸಿಂಗ್ ಸಂಸ್ಥೆಯ ಪ್ರತಿನಿಧಿಗಳು ಸಾರ್ವಜನಿಕ ಪ್ರತಿನಿಧಿಗಳು ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಪ್ರತಿ ತಿಂಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅಫಿದವಿತ್ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ಹಾಸ್ಟೆಲ್‍ಗಳಲ್ಲಿ ವಾಂತಿಬೇಧಿ ಪ್ರಕರಣಗಳು ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧ ಸಾಮೂಹಿಕ ರೋಗಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.