ಸಾರಾಂಶ
ಮಾರುಕಟ್ಟೆಯಲ್ಲಿ ದಿನ ಬಳಕೆ ವಸ್ತುಗಳ ಬೆಲೆಗಳು ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವುದರ ಮೂಲಕ ಕಡಿಮೆ ದರದಲ್ಲಿ ಜನರಿಗೆ ಆಹಾರ ವಸ್ತುಗಳನ್ನು ನೀಡುತ್ತಿದೆ.
ಚಿತ್ರದುರ್ಗ:ಮಾರುಕಟ್ಟೆಯಲ್ಲಿ ದಿನ ಬಳಕೆ ವಸ್ತುಗಳ ಬೆಲೆಗಳು ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವುದರ ಮೂಲಕ ಕಡಿಮೆ ದರದಲ್ಲಿ ಜನರಿಗೆ ಆಹಾರ ವಸ್ತುಗಳನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಪಡೆಯುವಂತೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ಸಂತೇಪೇಟೆ ವೃತ್ತದಲ್ಲಿ ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನು ವಿತರಣೆ ಮಾಡಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ 60 ರು. ಗೆ ಮಾರಾಟವಾಗುವ ಅಕ್ಕಿಯನ್ನು ಕೇಂದ್ರ ಸರ್ಕಾರ ಖರೀದಿ ಮಾಡಿ ಸಹಾಯಧನದ ಅಡಿಯಲ್ಲಿ ಜನರಿಗೆ 29 ರು.ಗಳಿಗೆ ಮಾರಾಟ ಮಾಡುತ್ತಿದೆ. ಇದೇ ರೀತಿ ಈರುಳ್ಳಿ, ಬೇಳೆ, ಗೋಧಿಯನ್ನು ಮುಂದಿನ ದಿನದಲ್ಲಿ ಜನರಿಗೆ ಕಡಿಮೆ ದರದಲ್ಲಿ ವಿತರಣೆ ಮಾಡಲಾಗುವುದು. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ದಿನಸಿಯನ್ನು ಖರೀದಿ ಮಾಡುವ ಶಕ್ತಿ ಇಲ್ಲದಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ ಈ ರೀತಿಯಾಗಿ ಕಾರ್ಯಕ್ರಮ ರೂಪಿಸಿ ಜನರಿಗೆ ನೀಡಲಾಗುತ್ತಿದೆ ಎಂದರು.ಒಬ್ಬ ವ್ಯಕ್ತಿಗೆ 40 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಇದನ್ನು ಖರೀದಿ ಮಾಡಲು ಬರುವವರು ಮೊಬೈಲ್ ಫೋನ್ ತರಬೇಕು. ಒಮ್ಮೆ ಅಕ್ಕಿಯನ್ನು ಖರೀದಿ ಮಾಡಿದವರು ಮುಂದಿನ 40 ದಿನವರೆಗೆ ಮತ್ತೆ ಖರೀದಿ ಮಾಡುವಂತಿಲ್ಲ. ಈಗ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಉಳಿದ ದಿನಸಿಯನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ರಾಮ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ತಿಪ್ಪೇಸ್ವಾಮಿ ಶಂಭು, ಕಿರಣ, ಕೃಷ್ಣಾ, ಚೇತನ ಭಾಗವಹಿಸಿದ್ದರು.