ಉತ್ತರ ಕನ್ನಡದಲ್ಲಿ 3.40 ಲಕ್ಷ ಜಾನುವಾರಿಗೆ ಕಾಲುಬಾಯಿ ರೋಗ ಲಸಿಕೆ ಗುರಿ

| Published : Apr 24 2025, 11:46 PM IST

ಉತ್ತರ ಕನ್ನಡದಲ್ಲಿ 3.40 ಲಕ್ಷ ಜಾನುವಾರಿಗೆ ಕಾಲುಬಾಯಿ ರೋಗ ಲಸಿಕೆ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಏ.26ರಿಂದ ಜೂ.9ರವರೆಗೆ 4-5 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಪ್ರತಿಬಂಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಏಕಕಾಲಕ್ಕೆ ಆರಂಭಿಸಬೇಕು. ಈ ಲಸಿಕೆಯ ಜತೆಗೆ ಚರ್ಮಗಂಟು ರೋಗಕ್ಕೆ ಲಸಿಕೆಯನ್ನು ಒಟ್ಟಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.

ಕಾರವಾರ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ 7ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ 3,40,055 ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಿ ಸಂಪೂರ್ಣ ಗುರಿ ಸಾಧಿಸುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ 7ನೇ ಸುತ್ತಿನ ಕಾಲುಬಾಯಿ ಜ್ವರದ ಪ್ರತಿಬಂಧಕ ಲಸಿಕಾ ಕಾರ್ಯಕ್ರಮದ ಜಿಲ್ಲಾಮಟ್ಟದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಏ.26ರಿಂದ ಜೂ.9ರವರೆಗೆ 4-5 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಪ್ರತಿಬಂಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಏಕಕಾಲಕ್ಕೆ ಆರಂಭಿಸಬೇಕು. ಈ ಲಸಿಕೆಯ ಜತೆಗೆ ಚರ್ಮಗಂಟು ರೋಗಕ್ಕೆ ಲಸಿಕೆಯನ್ನು ಒಟ್ಟಿಗೆ ನೀಡುವಂತೆ ತಿಳಿಸಿದರು.

ಲಸಿಕೆ ನೀಡಲು ಅಗತ್ಯವಿರುವ ಲಸಿಕೆದಾರರನ್ನು ನೇಮಿಸಿ, ಬ್ಲಾಕ್‌ಗಳನ್ನು ರಚಿಸಬೇಕು. ಲಸಿಕೆದಾರರು ಪ್ರತಿದಿನ ನಿಗದಿತ ಸಂಖ್ಯೆಯ ಜಾನುವಾರುಗಳಿಗೆ ಲಸಿಕೆ ನೀಡುವ ಕುರಿತು ಗುರಿ ನಿಗದಿಪಡಿಸಬೇಕು. ಜಿಲ್ಲೆಯಾದ್ಯಂತ ಅಗತ್ಯ ಪ್ರಮಾಣದಲ್ಲಿ ಲಸಿಕೆಯ ದಾಸ್ತಾನು ಲಭ್ಯವಿರುವಂತೆ ಎಚ್ಚರವಹಿಸಿ, ಪ್ರತಿ ಜಾನುವಾರುಗಳಿಗೆ ಪ್ರತ್ಯೇಕ ಸೂಜಿ ಮತ್ತು ಸಿರಿಂಜ್‌ ಬಳಸಬೇಕು ಎಂದರು.

ಪ್ರತಿ ಗ್ರಾಮಗಳಲ್ಲಿ ಲಸಿಕೆ ನೀಡುವ ದಿನಾಂಕದ ಕುರಿತಂತೆ ಸಾಕಷ್ಟು ಮುಂಚಿತವಾಗಿ ದಿನಪತ್ರಿಕೆಗಳ ಮೂಲಕ ಮತ್ತು ಆ ಗ್ರಾಮದ ವ್ಯಾಪ್ತಿಯಲ್ಲಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಬೇಕು. ಪ್ರತಿದಿನದ ಪ್ರಗತಿಯ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಬೇಕು ಎಂದರು.

ಕಾಲುಬಾಯಿ ರೋಗದಿಂದ ಜಾನುವಾರುಗಳು ಆಹಾರ ಸೇವಿಸುವ ಸಾಮರ್ಥ್ಯ ಕಳೆದುಕೊಂಡು ಹಾಲಿನ ಉತ್ಪಾದನೆ ಕಡಿಮೆಯಾಗುವುದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಲಿದೆ. ಈ ರೋಗದ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಜತೆಗೆ, ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಯಾವುದೇ ಜಾನುವಾರು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಬೇಕು. ಜಿಲ್ಲೆಯ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಕಾಲು-ಬಾಯಿ ರೋಗ ಪ್ರತಿಬಂಧಕ ಲಸಿಕೆ ಕೊಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಕೆ.ಎಂ. ಮೋಹನಕುಮಾರ್ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳು ಪಶು ವೈದ್ಯಾಧಿಕಾರಿಗಳು ಇದ್ದರು.