ಒಂದೇ ವೇದಿಕೆಯಲ್ಲಿ 57 ಶ್ರೀಗಳಿಗೆ ಪಾದಪೂಜೆ, ಗುರುವಂದನೆ

| Published : Sep 06 2025, 01:00 AM IST

ಒಂದೇ ವೇದಿಕೆಯಲ್ಲಿ 57 ಶ್ರೀಗಳಿಗೆ ಪಾದಪೂಜೆ, ಗುರುವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮಂಗಲ: ರಾಜ್ಯದಲ್ಲಿ 50 ವರ್ಷ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿದ 57 ಶ್ರೀಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು 55 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲು. ವಿಶ್ವ ದಾಖಲೆ ಸೇರಲಿರುವ ಮಠದ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತೇವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನೆಲಮಂಗಲ: ರಾಜ್ಯದಲ್ಲಿ 50 ವರ್ಷ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿದ 57 ಶ್ರೀಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು 55 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲು. ವಿಶ್ವ ದಾಖಲೆ ಸೇರಲಿರುವ ಮಠದ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತೇವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಸದಾಶಿವ ಸ್ವಾಮೀಜಿಯ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಹಾಗೂ 57 ಸ್ವಾಮೀಜಿಗಳಿಗೆ ಪಾದಪೂಜೆ, ಗುರುವಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ದೇವರಮಠದಲ್ಲಿ ಸಂಸ್ಕಾರ, ಆಚಾರ ವಿಚಾರಗಳನ್ನು ಬಿತ್ತರಿಸುತ್ತಿದ್ದಾರೆ. 21ನೇ ಶತಮಾನದಲ್ಲಿ ಶಿವಕುಮಾರ ಸ್ವಾಮೀಜಿ ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. 25 ಕಿ.ಮೀ. ದೂರದಲ್ಲಿರುವ ನೆಲಮಂಗಲದ ಈ ಮಠ ವಿಶ್ವ ಮಟ್ಟದಲ್ಲಿ ದಾಖಲೆಯಾಗಲಿದೆ ಎಂದರು.

ನನಗೆ ರಾಜಕೀಯ ಮುಳ್ಳಿನ ಹಾದಿಯಾದಾಗ ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀಗಳು ಧೈರ್ಯ ತುಂಬಿದ್ದಾರೆ. ಮಠ ಮಾನ್ಯಗಳ ಸ್ವತ್ತನ್ನು ತಿಂದವರು ಯಾರೂ ಉದ್ದಾರ ಆಗುವುದಿಲ್ಲ. ಸಣ್ಣ ಮಠಗಳು ದೊಡ್ಡಮಠಗಳಾಗಿವೆ. ಪ್ರಧಾನ ಮಂತ್ರಿ ಮೋದಿಯವರು ಏಕರೂಪ ಶಿಕ್ಷಣ ಜಾರಿಗೆ ತಂದಿದ್ದಾರೆ. ಎಲ್ಲರೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಆಗುವುದಿಲ್ಲ. ನಾಡಿನ ಪೂಜ್ಯರು ಶಿಕ್ಷಣಕ್ಕೆ ಎಷ್ಟು ಪ್ರಚಾರ ನೀಡುತ್ತಾರೋ ಅಷ್ಟೇ ಧರ್ಮವನ್ನು ಉಳಿಸುವ ಕೆಲಸಕ್ಕೆ ಮಾಡಬೇಕು ಎಂದರು.

ಶ್ರೀಮಠಕ್ಕೆ ಮೆಡಿಕಲ್ ಕಾಲೇಜ:

ನೆಲಮಂಗಲದಲ್ಲಿ ಮೆಡಿಕಲ್ ಕಾಲೇಜು ಆಗುವುದರಿಂದ ತುಮಕೂರು ಹಾಗೂ ನೆಲಮಂಗಲಕ್ಕೆ ಅನುಕೂಲವಾಗಲಿದೆ ಬಸವಣ್ಣದೇವರ ಮಠದಲ್ಲಿ ಮೆಡಿಕಲ್ ಕಾಲೇಜು ಮಾಡಲು ಸಂಸದರು ಹಾಗೂ ನಾನು ಚರ್ಚೆ ಮಾಡುತ್ತೇವೆ ಎಂದರು.

ಸಿದ್ದಗಂಗಾಮಠದ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ದೇಶಕ್ಕೆ, ರಾಜ್ಯಕ್ಕೆ ಮಠಗಳ ಕೊಡುಗೆ ಅಪಾರ. ಸರ್ಕಾರ ಮಾಡುವ ಕೆಲಸವನ್ನು ಮಠಗಳು ಮಾಡುತ್ತಿವೆ. ನಮ್ಮ ಆಚಾರ ವಿಚಾರ ಸಂಸ್ಕಾರದ ಬಗ್ಗೆ ಮಠಗಳು ಪ್ರಚಾರ ಮಾಡುತ್ತಿವೆ. ನೆಲಮಂಗಲದ ಶಾಸಕ ಶ್ರೀನಿವಾಸ್‍ ಮಠದ ಅಂಗಳವನ್ನು ಕಾಂಕ್ರೀಟ್ ಮಾಡಿಸಿದ್ದು ಅವರನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ ಎಂದರು.

ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಆಸೆಯಂತೆ ಶ್ರೀಮಠದಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಬಸವ ಜಯಂತಿ ಸಂದರ್ಭದಲ್ಲಿ ಒಂದು ಸಾವಿರ ವಚನ ಹೇಳಿದರೆ ಒಂದು ಲಕ್ಷ ರು. ಬಹುಮಾನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣ ದೇವರ ಮಠದಲ್ಲಿ ನಡೆಯುತ್ತಿರುವ ಈ ಸಮಾರಂಭ ಪವಾಡದಂತೆ ರೂಪುಗೊಂಡಿದೆ. ಸದಾಶಿವ ಸ್ವಾಮೀಜಿಗಳು 31 ವರ್ಷಗಳ ಕಾಲ ಮಠಾಧೀಶರಾಗಿ ಕೆಲಸ ಮಾಡಿದ್ದು, ಮುಮ್ಮಡಿ ಸ್ವಾಮೀಜಿ ದೀಕ್ಷೆ ನೀಡಿದವರು, ಇವರ ಪೀಠಾಧಿಕಾರದ ಸುವರ್ಣ ಮಹೋತ್ಸವದಂದು 57 ಜಂಗಮರ ಪಾದಪೂಜೆಯೊಂದಿಗೆ 57 ಕುಟುಂಬಗಳು ಪಾದಪೂಜೆ ಮಾಡಿ ಸೌಭಾಗ್ಯರಾಗಿದ್ದಾರೆ. ಲಿಂಗೈಕ್ಯ ಪೂಜ್ಯರ ಆಶೀರ್ವಾದ ಮಾರ್ಗದರ್ಶನದಲ್ಲಿ ಶ್ರೀಮಠದ ಆಡಳಿತ ನಡೆಯುತ್ತಿದೆ ಎಂದರು.

57 ಶ್ರೀಗಳಿಗೆ ಪಾದಪೂಜೆ:

ಕಾರ್ಯಕ್ರಮದಲ್ಲಿ ವಿವಿಧ ಮಠಗಳಲ್ಲಿ ಪೀಠಾಧ್ಯಕ್ಷರಾಗಿ 50 ವರ್ಷ ಪೂರೈಸಿದ ರಾಜ್ಯದ 57 ಮಠಗಳ ಹಿರಿಯ ಪೀಠಾಧ್ಯಕ್ಷ ಶ್ರೀಗಳಿಗೆ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಲಾಯಿತು, 57 ಕುಟುಂಬಗಳು ಪಾದಪೂಜೆ ಮಾಡಿದ್ದು ಪ್ರತಿ ಶ್ರೀಗಳಿಗೆ 50 ಸಾವಿರ ಗುರು ಕಾಣಿಕೆ, 50 ಕೆ.ಜಿಯ 2 ಮೂಟೆ ರುದ್ರಾಕ್ಷಿ, 50 ಕೆಜಿ ವಿಭೂತಿ, ಪುಸ್ತಕಗಳು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಎಲ್ಲಾ ಶ್ರೀಗಳಿಗೂ ಬಸವಣ್ಣ ದೇವರಮಠದ ಶ್ರೀಗಳು ನೀಡಿದರು.

30 ಶಿಕ್ಷಕರಿಗೆ ಸದಾಶಿವ ಗುರುಶ್ರೀ ಪ್ರಶಸ್ತಿ:

ಚಿಕ್ಕಬಳ್ಳಾಪುರ ಸಂಸದ ಡಾ.ಕೆಸುಧಾಕರ್ ಅವರಿಗೆ ಸದಾಶಿವ ಗುರುಶ್ರೀ ಪ್ರಶಸ್ತಿ ನೀಡಿ ಅಭಿನಂದಿಸಿದರು. ನಂತರ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ 30 ಶಿಕ್ಷಕರಿಗೆ ಶ್ರೀಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸುತ್ತೂರು ಹಾಗೂ ಸಿದ್ದಗಂಗಾ ಶ್ರೀಗಳು ರಾಜ್ಯಮಟ್ಟದ ಸದಾಶಿವ ಗುರುಶ್ರೀ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಸಿ.ಪಾಲಯ್ಯ, ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲಯ್ಯ, ಬೆಂಗಳೂರು ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಹೊಂಬಯ್ಯ ಇತರರಿದ್ದರು.

ಪೋಟೋ 5 :

ಬಸವಣ್ಣ ದೇವರಮಠದಲ್ಲಿ ರಾಜ್ಯದ 57 ಮಠಾಧೀಶರಿಗೆ ಪಾದಪೂಜೆ.

ಪೋಟೋ 6 :

ಕಾರ್ಯಕ್ರಮವನ್ನು ಸಿದ್ದಗಂಗಾ ಮಠ ಹಾಗೂ ಸುತ್ತೂರು ಮಠದ ಶ್ರೀಗಳು, ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.