ಕೌಶಲ್ಯದ ಕೊರತೆಯಿಂದ ದೇಶ ಹಿಂದೆ ಬಿದ್ದಿದೆ. ಕಾಲೇಜುಗಳು ಪ್ರತಿಷ್ಠಿತ ಕಂಪನಿಗಳೊಂದಿಗೆ ಕೈಜೋಡಿಸಿ ಅಲ್ಲಿನ ಅಗತ್ಯತೆ ಬಗ್ಗೆ ಅರಿವು ಮೂಡಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಉತ್ತಮ ಭವಿಷ್ಯಕ್ಕಾಗಿ ಯುವ ಸಮೂಹಕ್ಕೆ ಶಿಕ್ಷಣದೊಂದಿಗೆ ಕೌಶಲಾಭಿವೃದ್ಧಿ ಅಗತ್ಯ ಎಂದು ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.ನಗರದ ಮಾನಸಗಂಗೋತ್ರಿಯ ಮೈಸೂರು ವಿವಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರವು ಆಯೋಜಿಸಿರುವ ರೇಷ್ಮೆ ಕೃಷಿಯಲ್ಲಿ ಕೌಶಲಾಭಿವೃದ್ಧಿ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಕೌಶಲ್ಯದ ಕೊರತೆಯಿಂದ ದೇಶ ಹಿಂದೆ ಬಿದ್ದಿದೆ. ಕಾಲೇಜುಗಳು ಪ್ರತಿಷ್ಠಿತ ಕಂಪನಿಗಳೊಂದಿಗೆ ಕೈಜೋಡಿಸಿ ಅಲ್ಲಿನ ಅಗತ್ಯತೆ ಬಗ್ಗೆ ಅರಿವು ಮೂಡಿಸಬೇಕು. ಕಂಪನಿಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿದೆ. ಆದರೆ, ಅಲ್ಲಿನ ಗುಣಮಟ್ಟ ಹಾಗೂ ಅಗತ್ಯವಿರುವ ಕೌಶಲವುಳ್ಳ ಅಭ್ಯರ್ಥಿಗಳ ಕೊರತೆ ಇದೆ. ಶಿಕ್ಷಣದಿಂದಷ್ಟೇ ಈ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಅವರು ಹೇಳಿದರು.ವಿದ್ಯಾರ್ಥಿಗಳು ಪರೀಕ್ಷೆ ಬರೆದು ತೇರ್ಗಡೆಯಾಗುವುದರ ಕುರಿತಷ್ಟೇ ಚಿಂತಿಸದೆ, ಕೌಶಲ ಬೆಳೆಸಿಕೊಳ್ಳಬೇಕು. ಸರ್ಕಾರ ಉದ್ಯಮವನ್ನು ಪ್ರೋತ್ಸಾಹಿಸುತ್ತಿದ್ದು, ಯುವ ಸಮೂಹ ಉದ್ಯೋಗದಾತರಾಗುವ ಬಗ್ಗೆ ಚಿಂತಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಬಳಸಿ ಮುಂದುವರೆದಾಗ ಬೆಳೆಯಲು ಸಾಧ್ಯ ಎಂದರು.ಕೇಂದ್ರ ರೇಷ್ಮೆ ಮಂಡಳಿ ತಾಂತ್ರಿಕ ನಿರ್ದೇಶಕ ಡಾ.ಎಸ್. ಮಂಥಿರ ಮೂರ್ತಿ, ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಿ. ಸಣ್ಣಪ್ಪ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಪ್ರೊ.ಟಿ.ಎಸ್. ಜಗದೀಶ್ ಕುಮಾರ್ ಇದ್ದರು.-- ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಅಭಿಮತಫೋಟೋ- 5ಎಂವೈಎಸ್7