ಕುಟುಂಬ ಸುಸೂತ್ರವಾಗಿ ನಡೆಯಲು ಮನೆಯ ಯಜಮಾನರು, ಹಿರಿಯರು ಆಚಾರ-ವಿಚಾರ, ಕಾರ್ಯ ಚಟುವಟಿಕೆ ಹಾಗೂ ಕುಟುಂಬ ಸದಸ್ಯರ ಮಧ್ಯೆ ಬಾಂಧವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಗಳೂರಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
- ದಸರಾ ಅಂಗವಾಗಿ ಅಂಬುಛೇದನ ಕಾರ್ಯಕ್ರಮದಲ್ಲಿ ಡಾ.ನಾಲ್ವಡಿ ಶಾಂತಲಿಂಗ ಶ್ರೀ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕುಟುಂಬ ಸುಸೂತ್ರವಾಗಿ ನಡೆಯಲು ಮನೆಯ ಯಜಮಾನರು, ಹಿರಿಯರು ಆಚಾರ-ವಿಚಾರ, ಕಾರ್ಯ ಚಟುವಟಿಕೆ ಹಾಗೂ ಕುಟುಂಬ ಸದಸ್ಯರ ಮಧ್ಯೆ ಬಾಂಧವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಗಳೂರಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಬುಧವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಮ್ಮಿಕೊಂಡಿದ್ದ ಅಂಬುಛೇದನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕುಟುಂಬದಲ್ಲಿ ಎದುರಾಗುವ ಗೊಂದಲ, ಒತ್ತಡ, ಸಂಘರ್ಷಗಳನ್ನು ಪರಿಹರಿಸಲು ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಮುಕ್ತವಾಗಿ ಚರ್ಚಿಸಬೇಕು. ಪರಸ್ಪರ ಹೊಂದಾಣಿಕೆ, ಸಂವಾದದಿಂದ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.ಶಿವ-ಪಾರ್ವತಿ ಪರಿವಾರವು ಜಗತ್ತಿಗೆ ಸಾಮರಸ್ಯದ ಅತ್ಯುತ್ತಮ ಆದರ್ಶವಾಗಿದೆ. ಶಿವನ ಮಸ್ತಕದಲ್ಲಿ ಚಂದ್ರ, ಕಂಠದಲ್ಲಿ ಹಾಲಾಹಲ ವಿಷ, ಕಣ್ಣಿನಲ್ಲಿ ಅಗ್ನಿ, ಮಸ್ತಕದಲ್ಲಿ ಗಂಗೆಯಿದ್ದರೂ ಆ ಪರಿವಾರದಲ್ಲಿ ಸಾಮರಸ್ಯಕ್ಕೆ ಕೊರತೆ ಇಲ್ಲ. ಶಿವನ ವಾಹನ ನಂದಿ, ಪಾರ್ವತಿ ವಾಹನ ಸಿಂಹ, ಕಾರ್ತಿಕೇಯನ ವಾಹನ ನವಿಲು, ಗಣಪತಿ ವಾಹನ ಮೂಷಿಕ. ಪರಸ್ಪರ ವಿರೋಧಿ ಸ್ವಭಾವದ ಈ ಪ್ರಾಣಿಗಳು ಒಂದೇ ಪರಿವಾರದಲ್ಲಿ ಯಾವುದೇ ಸಂಘರ್ಷವಿಲ್ಲದೇ ಬಾಳುವ ಮೂಲಕ ಹೊಂದಾಣಿಕೆಯ ಸಂದೇಶಗಳನ್ನು ನಮಗೆ ನೀಡುತ್ತವೆ. ಅದೇ ರೀತಿ ಕುಟುಂಬ ಸುಸೂತ್ರವಾಗಿ ನಡೆಯಲು ಮನೆ ಯಜಮಾನರು, ಸದಸ್ಯರು ಸದಾ ಒಂದಾಗಿರಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ ಆರೋಗ್ಯವಂತ, ಜ್ಞಾನವಂತ, ಸಂಸ್ಕಾರವಂತ ಯುವಶಕ್ತಿಯೇ ದೇಶದ ನಿಜವಾದ ಸಂಪತ್ತು. ಯುವಜನರು ದುಶ್ಚಟಗಳಿಂದ ದೂರವಿದ್ದು, ಪೋಷಕರನ್ನು ಗೌರವಿಸಿ, ಆ ಹಿರಿಯ ಜೀವಗಳ ಆರೈಕೆಗೆ ಗಮನ ನೀಡಬೇಕು. ಶರೀರಮಾದ್ಯಂ ಖಲು ಧರ್ಮಸಾಧನಂ ಎಂಬಂತೆ ಆರೋಗ್ಯವು ಸಾಧನೆಗೆ ಮೂಲವಾಗಿದೆ. ಸಾತ್ವಿಕ, ಶುದ್ಧ ಆಹಾರ ಸೇವನೆ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪೋಷಕರು ಮಕ್ಕಳಿಗೆ ಧಾರ್ಮಿಕ ಭಾವನೆ, ಭಾರತೀಯ ಸಂಸ್ಕೃತಿ, ಪರಂಪರೆ, ದೇಶಭಕ್ತಿ, ಉತ್ತಮ ನಡವಳಿಕೆಗಳನ್ನು ಬಾಲ್ಯದಿಂದಲೇ ಕಲಿಸಬೇಕು ಎಂದರು.ದುಷ್ಟರ ಸಂಹಾರ, ಶಿಷ್ಟರ ಸಂರಕ್ಷಣೆಯಲ್ಲಿ ಶರಣ ಸಂತರು ಹಾಗೂ ಮಹಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ವಿದೇಶಗಳಲ್ಲಿ ದಂಪತಿಗಳಿಗೆ ಸೀಮಿತವಾದ ಕುಟುಂಬ ವ್ಯವಸ್ಥೆ ಹೆಚ್ಚಾಗಿದ್ದರೂ, ಭಾರತದಲ್ಲಿ ಇಂದಿಗೂ ಕೂಡು ಕುಟುಂಬದ ಸಂಪ್ರದಾಯ ಜೀವಂತವಿರುವುದು ವಿಶೇಷ ಎಂದು ಶ್ಲಾಘಿಸಿದರು.
ತಹಸೀಲ್ದಾರ್ ರಾಜೇಶ ಅಂಬುಛೇದನ ನೆರವೇರಿಸಿ, ಎಲ್ಲರಿಗೂ ದಸರಾ ಹಬ್ಬದ ಶುಭ ಕೋರಿದರು. ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ ಮಾತನಾಡಿದರು. ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಕೈಗಾರಿಕೋದ್ಯಮಿ ಎಂ.ಆನಂದ, ದಸರಾ ಸಮಿತಿ ಅಧ್ಯಕ್ಷ ಆರ್.ಎಲ್.ಶಿವಪ್ರಕಾಶ, ಮಾಜಿ ಮೇಯರ್ ಎಸ್.ಟಿ. ವೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗೌತಮ್ ಜೈನ್ ವಂದಿಸಿದರು.- - -
-21ಕೆಡಿವಿಜಿ15: ದಾವಣಗೆರಯಲ್ಲಿ ಬುಧವಾರ ದಸರಾ ಮಹೋತ್ಸವ ಅಂಗವಾಗಿ ತಹಸೀಲ್ದಾರ್ ರಾಜೇಶ ಅಂಬುಛೇದನ ನೆರವೇರಿಸಿದರು.