ಆರೋಗ್ಯಕರ ಬದುಕಿಗಾಗಿ ಪಟಾಕಿ ಬಿಟ್ಟು ಬೆಳಕಿನ ಹಬ್ಬ ಆಚರಿಸಿ; ತ್ರಿವೇಣಿ

| Published : Oct 22 2025, 01:03 AM IST

ಸಾರಾಂಶ

ನೂರಾರು ಮಕ್ಕಳು ಪಟಾಕಿಗಳಿಂದ ಕಣ್ಣು ಕಳೆದುಕೊಂಡು, ಮೈಕೈ ಸುಟ್ಟು ಕೊಂಡು ಶಾಶ್ವತ ಊನವಾಗುತ್ತಿದ್ದು, ಪಟಾಕಿ ಸುಡುವ ಬದಲು ಹೊಸ ಬಟ್ಟೆ ತೊಡಿ, ನಿರಾಶ್ರಿತರೊಂದಿಗೆ ಹಣತೆ ಹಚ್ಚಿ ಹಬ್ಬದೂಟ ಸವಿಯಿರಿ .

ಕಿಕ್ಕೇರಿ: ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಮಾಡುವುದನ್ನು ಬಿಟ್ಟು ಪಟಾಕಿ ರಹಿತ ಬೆಳಕಿನ ಹಬ್ಬ ಆಚರಿಸುವಂತೆ ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಹೇಳಿದರು.

ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘ ಆಯೋಜಿಸಿದ್ದ ಪಟಾಕಿ ಬಿಡಿ, ಪರಿಸರ ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ದೀಪಾವಳಿ ಹಬ್ಬವು ಕತ್ತಲಿನಿಂದ ದೂರ ಸರಿಸುವ ಬದಲು ಆರೋಗ್ಯಕ್ಕೆ ಕತ್ತಲು, ಪಟಾಕಿಯಿಂದ ಮೈಕೈ ಸುಟ್ಟು ಕೊಳ್ಳುವ, ಕಣ್ಣು ಕಳೆದುಕೊಳ್ಳುವ ಹಬ್ಬದಂತಾಗಿದೆ. ಈಗಾಗಲೇ ಪರಿಸರ ಸಾಕಷ್ಟು ಮಾಲಿನ್ಯವಾಗಿದೆ ಎಂದರು.

ಪಟಾಕಿ ಸುಡುವುದರಿಂದ ಹಾನಿಕಾರಕ ವಿಷ ಗಂಧಕ, ನೈಟ್ರಸ್‌ ಆಕ್ಸೈಡ್, ಪಾದರಸ, ಸೀಸ, ಕ್ಯಾಡ್ಮಿಯಂ, ಲಿಥಿಯಂ, ಬೇರಿಯಂ, ಆರ್ಸೆನಿಕ್, ಸೀಸ ಪರಿಸರಕ್ಕೆ ಸೇರಲಿದೆ. ಪರಿಣಾಮ ಚರ್ಮವ್ಯಾಧಿ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌ನಂತಹ ಹಲವು ಕಾಯಿಲೆಗಳನ್ನು ದುಡ್ಡುಕೊಟ್ಟು ನಾವೇ ಪಡೆದುಕೊಳ್ಳುವಂತಾಗಲಿದೆ ಎಂದು ಎಚ್ಚರಿಸಿದರು.

ಬೆಳಕಿನ ಹಬ್ಬ ಪ್ರಾಣಿ ಪಕ್ಷಿಗಳಿಗೆ ಕಂಟಕವಾಗಿದೆ. 160ಕ್ಕೂ ಹೆಚ್ಚು ಡೆಸಿಬಲ್‌ನ ಪಟಾಕಿ ಶಬ್ಧದಿಂದ ಜಾನುವಾರುಗಳು ಹಾಲು ಕೊಡಲು ಬೆದರಲಿವೆ. ಸಾಕುಪ್ರಾಣಿ, ಪಕ್ಷಿಗಳು ಒಂದೆಡೆ ಉಸಿರಾಟ ತೊಂದರೆ, ಅಧಿಕ ಶಬ್ಧಕ್ಕೆ ವಿಚಿತ್ರವಾಗಿ ವರ್ತಿಸಲಿವೆ. ಮತ್ತೊಂದೆಡೆ ಬಿಪಿ ಹೆಚ್ಚಳ, ರೋಗಿಗಳ ಸಿಡಿಮಿಡಿ, ಬಾಣಂತಿ, ಮಕ್ಕಳು, ವಯೋವೃದ್ಧರಲ್ಲಿ ಆರೋಗ್ಯ ಏರುಪೇರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಸೇವಾಕರ್ತೆ ಕವಿತಾ ಮಾತನಾಡಿ, ನೂರಾರು ಮಕ್ಕಳು ಪಟಾಕಿಗಳಿಂದ ಕಣ್ಣು ಕಳೆದುಕೊಂಡು, ಮೈಕೈ ಸುಟ್ಟು ಕೊಂಡು ಶಾಶ್ವತ ಊನವಾಗುತ್ತಿದ್ದು, ಪಟಾಕಿ ಸುಡುವ ಬದಲು ಹೊಸ ಬಟ್ಟೆ ತೊಡಿ, ನಿರಾಶ್ರಿತರೊಂದಿಗೆ ಹಣತೆ ಹಚ್ಚಿ ಹಬ್ಬದೂಟ ಸವಿಯಿರಿ ಎಂದು ಹೇಳಿದರು.

ಇದೇ ವೇಳೆ ಮಕ್ಕಳು ಪಟಾಕಿ ಹಾನಿಯ ಮಾಹಿತಿ ತಿಳಿದು ಭಾರೀ ಶಬ್ಧದ ಪಟಾಕಿ ಸುಡುವುದಿಲ್ಲ. ಸಣ್ಣ ಪಟಾಕಿಯನ್ನುಕಡಿಮೆ ಪ್ರಮಾಣದಲ್ಲಿ ಸುಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.