ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿಜಯಪುರದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಅವರು ಜ.೨ಕ್ಕೆ ಲಿಂಗೈಕ್ಯರಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸಿದ್ದೇಶ್ವರರ ಭಾವಚಿತ್ರ ನೀಡುವ ಮೂಲಕ ತಾವು ಗುರುನಮನ ಸಲ್ಲಿಸುತ್ತಿರುವುದಾಗಿ ವಿಜಯಪುರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಹೇಳಿದರು.ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ, ತಾಲೂಕು ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘಕ್ಕೆ ಬುಧವಾರ ಪೂಜ್ಯ ಸಿದ್ದೇಶ್ವರರ ಭಾವಚಿತ್ರ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಶತಮಾನದ ಸಂತ, ದಾರ್ಶನಿಕರಾಗಿದ್ದ ಪೂಜ್ಯ ಸಿದ್ದೇಶ್ವರರು ನಡೆದು ಬಂದ ದಾರಿ, ಅವರ ತತ್ವ-ಸಂದೇಶಗಳು ಎಂದಿಗೂ ಎಲ್ಲರಿಗೂ ಆದರ್ಶ,ಮಾರ್ಗದರ್ಶಿಯಾಗಿದೆ. ಜ.೨ ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಗುರುನಮನ ನಡೆಯುತ್ತಿದೆ. ಅಂದು ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿಯೂ ಗುರುನಮನ ನಡೆಯುವ ಸಂದರ್ಭದಲ್ಲಿ ಪೂಜ್ಯ ಸಿದ್ದೇಶ್ವರರ ಭಾವಚಿತ್ರ ಇದ್ದರೆ ಒಳ್ಳೆಯದು ಅನ್ನುವ ದೃಷ್ಟಿಕೋನದಿಂದ ತಾವು ಜಿಲ್ಲೆಯ ೩ ಸಾವಿರ ಶಾಲೆಗಳಿಗೆ, ಎಲ್ಲ ತಾಲೂಕಿನ ಶಿಕ್ಷಣ ಇಲಾಖೆಯ ಕಚೇರಿಗೆ ಅವರ ಭಾವಚಿತ್ರ ನೀಡುವ ಮೂಲಕ ತಾವು ಈ ಸೇವಾ ಕೈಂಕರ್ಯ ಮಾಡುತ್ತಿದ್ದೇನೆ. ಈ ಮೂಲಕ ಶಾಲಾ ಮಕ್ಕಳಿಗೆ ಅವರ ಆಚಾರ-ವಿಚಾರ, ಸಂಸ್ಕಾರ, ಜ್ಞಾನದ ಅರಿವು ಮೂಡಿ ಒಳ್ಳೆಯ ನಾಗರಿಕರಾಗಲು ಅನುಕೂಲವಾಗಲಿ ಅನ್ನುವ ಸದುದ್ದೇಶ ನಾನು ಹೊಂದಿರುವುದಾಗಿ ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಶಿಕ್ಷಕ ಜಗದೀಶ ಬೋಳಸೂರ ಅವರು ಜಿಲ್ಲೆಯ ಎಲ್ಲ ಶಾಲೆಗಳಿಗೆ ಸಿದ್ದೇಶ್ವರರ ಭಾವಚಿತ್ರ ನೀಡುತ್ತಿರುವು ಕಾರ್ಯ ಶ್ಲಾಘನೀಯ. ಸಿದ್ದೇಶ್ವರ ಸ್ವಾಮೀಜಿ ಅವರ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದರು.ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ, ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ಉಪಾಧ್ಯಕ್ಷ ಆರ್.ಡಿ.ಪವಾರ ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕರಾದ ಎಚ್.ಬಿ.ಬಾರಿಕಾಯಿ, ಎಸ್.ಪಿ.ಮಡಿಕೇಶ್ವರ, ಬಿಆರ್‌ಪಿ ಎಂ.ವ್ಹಿ.ಗಬ್ಬೂರ, ಎಂ.ಕೆ.ಪಾಟೀಲ, ಚನ್ನಯ್ಯ ಮಠಪತಿ, ಗೋಪಾಲ ಲಮಾಣಿ, ಚಂದ್ರು ಹದಿಮೂರ, ಕೋಟ್ರೇಶ ಹೆಗಡ್ಯಾಳ, ಎ.ಎ.ಜಾಗೀರದಾರ, ಎಂ.ಎಚ್.ಲಷ್ಕರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ವ್ಯವಸ್ಥಾಪಕ ಬಸವರಾಜ ವಡವಡಗಿ, ದುಂಡು ನುಚ್ಚಿ ಇತರರು ಇದ್ದರು.
---ಬಾಕ್ಸ್
ನಾಳೆ ಸಿದ್ಧೇಶ್ವರ ಶ್ರೀಗಳ ಗುರುನಮನವಿಜಯಪುರ:
ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.29ರಂದು ಮಧ್ಯಾಹ್ನ 3ಕ್ಕೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 3ಕ್ಕೆ ಗ್ರಾಮದ ಕಲ್ಲಯಾರೂಢ ಮಠದಿಂದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರ ಜೊತೆಗೆ ಪುಸ್ತಕ ಕಟ್ಟುಗಳ ಮೆರವಣಿಗೆ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವದು. ಸಂಜೆ 5 ಗಂಟೆಗೆ ಶ್ರೀಮಲ್ಲಿಕಾರ್ಜುನ ಶಾಲಾ ಆವರಣದಲ್ಲಿ ಗುರುನಮನ ಕಾರ್ಯಕ್ರಮ ಜರುಗಲಿದೆ. ನಾಗಠಾಣದ ಉದಯೆಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ಮತ್ತು ಕಲ್ಲಯಾರೂಢ ಮಠದ ಶ್ರೀ ಪ್ರಜ್ಞಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಗುರುನಮನ ಸಲ್ಲಿಸುವರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಶಿಕ್ಷಕರು,ಪಾಲಕರು, ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿರುವರು.