ಸಾರಾಂಶ
ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಪ್ರಮುಖರು ಕಾಲೇಜಿನ ಪ್ರಾಚಾರ್ಯರೊಂದಿಗೆ ಚರ್ಚೆ ನಡೆಸಿದರು.
ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯಿಂದ ಪ್ರತಿಭಟಿಸಲಾಯಿತು.ಬೀದರ್ ವಿಶ್ವವಿದ್ಯಾಲಯದಿಂದ ಇಂದಿನಿಂದ ಪ್ರಾರಂಭವಾದ ದ್ವಿತೀಯ ಸೆಮಿಸ್ಟರ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲವೆಂದು ಆರೋಪಿಸಿದರು. ಹಲವು ದಿನಗಳಿಂದ ಕಾಲೇಜಿನಲ್ಲಿ ನೀರಿನ ತೊಂದರೆಯಾಗುತ್ತಿದೆ ಹೆಸರಿಗೆ ಮಾತ್ರ ನೀರು ಶುದ್ಧೀಕರಣ ಘಟಕವಿದೆ ಆದರೆ ಹನಿ ನೀರು ಕೂಡಾ ಇಲ್ಲ ಎಂದು ವಿದ್ಯಾರ್ಥಿಗಳು ಸಂಘಟನೆ ಮುಖಂಡರ ಮುಂದೆ ಅಳಲು ತೋಡಿಕೊಂಡರು.
ಕರವೇ ಅಧ್ಯಕ್ಷ ಅನೀಲ ದೇವಕತ್ತೆ ಮಾತನಾಡಿ, 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜಿನಲ್ಲಿ ಕುಡಿಯಲು ನೀರಿಲ್ಲದೆ ಇರುವುದು ವಿಷಾದನೀಯ ಸಂಗತಿಯಾಗಿದೆ. ನೀರಿನ ಪಾತ್ರೆ ಗಬ್ಬು ನಾರುತ್ತಿದ್ದೆ, ಇಂಥಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಹೇಗೆ ಅಭ್ಯಾಸ ಮಾಡಬೇಕು, ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವುದು ಸಹಿಸುವುದಿಲ್ಲ ಕೂಡಲೇ ಸಮಸ್ಯೆಗಳು ಬಗೆಹರಿಸದಿದ್ದರೆ ಕಾಲೇಜಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಪ್ರಾಂಶುಪಾಲರಾದ ಅಂಬಿಕಾದೇವಿಗೆ 2 ದಿನದಲ್ಲಿ ಮೋಟಾರ್ ರಿಪೇರಿ ಮಾಡಿಸಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು. ವೇದಿಕೆ ಉಪಾಧ್ಯಕ್ಷ ಸಚಿನ ಮೇತ್ರೆ, ಸುನಿಲ್ ಹಳವೆ, ಆಕಾಶ ಮೇತ್ರೆ, ಬಾಲಾಜಿ ದಾಮಾ, ಅಮರ ಮುಧಾಳೇ ಉಪಸ್ಥಿತರಿದ್ದರು.