ಜಾನಪದ ಕಲೆಗಳಾದ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ವೀರಗಾಸೆ, ಗೊರವನ ಕುಣಿತ, ಕಂಸಾಳೆ, ಪಟದ ಕುಣಿತ,ಕೋಲಾಟ ಮತ್ತಿತರ ನಮ್ಮ ಹಳೆಯ ಕಲೆ ಮತ್ತು ಸಂಸ್ಕೃತಿಗಳನ್ನು ಉಳಿಸುವ ಜೊತೆಗೆ ಇಂದಿನ ಪೀಳಿಗೆಗೆ ತರಬೇತಿ ನೀಡಿ ಶಾಶ್ವತ ಸ್ಥಾನ ನೀಡುವುದು ಸಂಸ್ಥೆ ಉದ್ದೇಶವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ಆರ್.ಕೆ.ವಿದ್ಯಾ ಸಂಸ್ಥೆ ವಿಶೇಷವಾಗಿ ಪ್ರಸಕ್ತ ಸಾಲಿನಿಂದ ಪ್ರಥಮ ಬಾರಿಗೆ ಜಾನಪದ ಕಲಾ ಕೇಂದ್ರದ ತರಬೇತಿ ಶಾಲೆಯನ್ನು ಅಸ್ತಿತ್ವಕ್ಕೆ ತಂದಿದೆ. ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಜಾನಪದ ಕಲಾ ಕೇಂದ್ರದ ಲಾಂಛನವನ್ನು ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ ಆರ್.ನಿಖಿಲ್ ಅನಾವರಣಗೊಳಿಸಿದರು.ಈ ವೇಳೆ ಮಾತನಾಡಿದ ಕೀರ್ತನ ಅವರು, ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ ಅವರ ಅಪೇಕ್ಷೆ ಮೇರೆಗೆ ಜಾನಪದ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಕಲೆಯು ಸಂಸ್ಕೃತಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದೆ. ಇದು ಜನರ ಬದುಕು, ನಂಬಿಕೆ ಮತ್ತು ಸಂಪ್ರದಾಯಗಳನ್ನು ಅನಾವರಣಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಆಧುನಿಕತೆ ಮತ್ತು ತಂತ್ರಜ್ಞಾನದ ಪ್ರಭಾವದಿಂದಾಗಿ ನಮ್ಮ ಪರಂಪರೆ ಉಳ್ಳ ಜಾನಪದ ಕಲೆಗಳು ಕಲಾವಿದರ ಕೊರತೆಯಿಂದಾಗಿ ಇಂದು ಅಳಿವಿನ ಅಂಚಿನಲ್ಲಿದೆ. ಜಾನಪದ ಕಲೆಗಳಾದ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ವೀರಗಾಸೆ, ಗೊರವನ ಕುಣಿತ, ಕಂಸಾಳೆ, ಪಟದ ಕುಣಿತ,ಕೋಲಾಟ ಮತ್ತಿತರ ನಮ್ಮ ಹಳೆಯ ಕಲೆ ಮತ್ತು ಸಂಸ್ಕೃತಿಗಳನ್ನು ಉಳಿಸುವ ಜೊತೆಗೆ ಇಂದಿನ ಪೀಳಿಗೆಗೆ ತರಬೇತಿ ನೀಡಿ ಶಾಶ್ವತ ಸ್ಥಾನ ನೀಡುವುದು ಸಂಸ್ಥೆ ಉದ್ದೇಶವಾಗಿದೆ ಎಂದು ನುಡಿದರು.ಶಾಲೆಯಲ್ಲಿ ಪ್ರತಿದಿನ ನಡೆಯುವ ಶೈಕ್ಷಣಿಕ ಚಟುವಟಿಕೆ ಜೊತೆಗೆ ಸಂಜೆ ವೇಳೆ ಒಂದು ಗಂಟೆಗಳ ಕಾಲ ಒಂದು ತಿಂಗಳು ಅಥವಾ 15 ದಿನಗಳ ಕಾಲ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದಕ್ಕೆ ತರಬೇತಿದಾರರಿಂದ ತರಬೇತಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆರ್.ವಿಜಯ್ ರಾಮಕೃಷ್ಣ, ಆಡಳಿತ ಅಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲರಾದ ಡಾ.ಎಂ.ಸಿ.ಸತೀಶ್ ಬಾಬು, ಆರ್.ಪ್ರವೀಣ್, ಮುಖ್ಯ ಶಿಕ್ಷಕರಾದ ರಮೇಶ್, ಕಲ್ಯಾಣಿ, ಪ್ರಭಾವತಿ ಸೇರಿದಂತೆ ಬೋಧಕ ಮತ್ತು ಬೋಧಕ್ಕೆ ತರ ಸಿಬ್ಬಂದಿ ಭಾಗವಹಿಸಿದ್ದರು.