ಸಾರಾಂಶ
ಉತ್ತಮ ಮಳೆ - ಬೆಳೆಗಾಗಿ ಪ್ರಾರ್ಥಿಸಿ ಚಳ್ಳಕೆರೆಯ ಪ್ರಮುಖ ಬೀದಿಗಳಲ್ಲಿ ಚಳ್ಳಕೆರೆಯಮ್ಮ ಹಾಗೂ ಉಡಸಲಮ್ಮ ದೇವರ ಮೆರವಣಿಗೆ ನಡೆಸಲಾಯಿತು.
ಚಳ್ಳಕೆರೆ: ಉತ್ತಮ ಮಳೆ - ಬೆಳೆಗಾಗಿ ಪ್ರಾರ್ಥಿಸಿ ಚಳ್ಳಕೆರೆಯ ಪ್ರಮುಖ ಬೀದಿಗಳಲ್ಲಿ ಚಳ್ಳಕೆರೆಯಮ್ಮ ಹಾಗೂ ಉಡಸಲಮ್ಮ ದೇವರ ಮೆರವಣಿಗೆ ನಡೆಸಲಾಯಿತು.
ಶಾಂತಿನಗರ ನಿವಾಸಿಗಳು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ಮೆರವಣಿಗೆಯಲ್ಲಿ ಭಾಗವಹಿಸಿ, ಕಳೆದ ವರ್ಷ ನಮ್ಮ ಸಮುದಾಯದಲ್ಲಿ ಹೆಚ್ಚಿನ ಯುವತಿಯರು ಮರಣಕ್ಕೀಡಾದ ಹಿನ್ನೆಲೆಯಲ್ಲಿ ನಾವು ದೇವತೆಗಳ ಮೊರೆ ಹೋಗಿದ್ದೇವೆ. ಕಳೆದ ವರ್ಷದಿಂದ ಈ ಮೆರವಣಿಗೆಯಲ್ಲಿ ವಿಶೇಷವಾಗಿ ಪಾಲ್ಗೊಳ್ಳುತ್ತಾ ಬಂದಿದ್ದೇವೆ. ದೇವತೆಗಳ ದಯೆಯಿಂದ ಸಾವು ನಿಯಂತ್ರಣಗೊಂಡ ಹಿನ್ನೆಲೆಯಲ್ಲಿ ಗ್ರಾಮ ದೇವತೆಗಳಾದ ಶ್ರೀಚಳ್ಳಕೆರೆಯಮ್ಮ ಮತ್ತು ಉಡಸಲಮ್ಮ ದೇವರಲ್ಲಿ ಪ್ರಾರ್ಥಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರತಿವರ್ಷದಂತೆ ಈ ವರ್ಷವೂ ಸಹ ಯುಗಾದಿ ಹಬ್ಬದ ಹೊಸ ಸಂತ್ಸರದ ಆರಂಭದಲ್ಲಿ ದೇವತೆಗಳ ಪೂಜೆಯನ್ನು ನೆರವೇರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವುದಲ್ಲದೆ, ನೂರಾರು ಭಕ್ತರು ದೇವಿಯ ದರ್ಶನ ಪಡೆಯುವ ಅವಕಾಶವನ್ನು ಸಹ ಎರಡೂ ದೇವಸ್ಥಾನದ ಆಡಳಿತ ಮಂಡಳಿ ಧರ್ಮದರ್ಶಿಗಳು ಕಲ್ಪಿಸಿದ್ದಾರೆ. ನಗರದ ಹಳೇಟೌನ್, ವೀರಭದ್ರಸ್ವಾಮಿ ದೇವಸ್ಥಾನದ ರಸ್ತೆ, ಪಾದಗಟ್ಟೆ, ಶಾಂತಿನಗರ ಮುಂತಾದ ಕಡೆ ಎರಡೂ ದೇವತೆಗಳ ಮೆರವಣಿಗೆ ವೈಭವದಿಂದ ನಡೆಯಿತು.
ಚಳ್ಳಕೆರೆ ತಾಲ್ಲೂಕು ಮಳೆ, ಬೆಳೆ ಇಲ್ಲದೆ ಬರಡಾಗುತ್ತಿದ್ದು, ಈ ಬಾರಿಯಾದರೂ ಮಳೆ, ಬೆಳೆ ನೀಡಿ ಜನರ ನೆಮ್ಮದಿಯ ಬಾಳಿಗೆ ದಾರಿತೋರಬೇಕೆಂದು ದೇವತಗಳಲ್ಲಿ ಪ್ರಾರ್ಥಿಸಲಾಯಿತು.ನಗರಸಭಾ ಸದಸ್ಯ ವಿ.ವೈ.ಪ್ರಮೋದ್, ಆರ್.ಪ್ರಸನ್ನಕುಮಾರ್, ವೆಂಕಟೇಶ್‌ಚಾರ್, ಶ್ರೀಧರ, ಬಾಲಾಜಿ, ಸಂತೋಷ್, ನಾಗರಾಜು, ಅಶೋಕ್, ಸುನಿತಾ, ನಳಿನ, ಭಾರತಿ, ರಾಜೇಶ್ವರಿ, ಲಕ್ಷ್ಮೀದೇವಿ ಮುಂತಾದವರು ಉಪಸ್ಥಿತರಿದ್ದರು. ೩೦ಸಿಎಲ್‌ಕೆ೧
ಚಳ್ಳಕೆರೆ ನಗರದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ದೇವತೆಗಳಾದ ಶ್ರೀಚಳ್ಳಕೆರೆಯಮ್ಮ ಮತ್ತು ಶ್ರೀಉಡಸಲಮ್ಮ ದೇವರ ಪೂಜೆ ಕಾರ್ಯ ನಡೆಯಿತು.