ಬಡವರ ಮಕ್ಕಳಿಗೆ ಸರಿಯಾದ ಪ್ರೋಟಿನ್ ಹಾಗೂ ಪೋಷಕಾಂಶಗಳು ಸಿಗಲಿ ಎಂಬ ಕಾರಣಕ್ಕೆ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಸರ್ಕಾರ ನೀಡುವ ಹಣಕ್ಕಿಂತ ಮೊಟ್ಟೆ ದುಬಾರಿಯಾಗಿರುವ ಹಿನ್ನೆಲೆ ಹೆಚ್ಚುವರಿ ಹಣ ಹಾಕಿ ಮುಖ್ಯ ಶಿಕ್ಷಕರು ಸುಸ್ತಾಗಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಬಡವರ ಮಕ್ಕಳಿಗೆ ಸರಿಯಾದ ಪ್ರೋಟಿನ್ ಹಾಗೂ ಪೋಷಕಾಂಶಗಳು ಸಿಗಲಿ ಎಂಬ ಕಾರಣಕ್ಕೆ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಸರ್ಕಾರ ನೀಡುವ ಹಣಕ್ಕಿಂತ ಮೊಟ್ಟೆ ದುಬಾರಿಯಾಗಿರುವ ಹಿನ್ನೆಲೆ ಹೆಚ್ಚುವರಿ ಹಣ ಹಾಕಿ ಮುಖ್ಯ ಶಿಕ್ಷಕರು ಸುಸ್ತಾಗಿದ್ದಾರೆ. ಇನ್ನು ಕೆಲವು ಕಡೆಗಳಲ್ಲಂತೂ ಮೊಟ್ಟೆಯ ಭಾರ ತಡೆಯದಂತಾದ ಶಿಕ್ಷಕರು ಮಕ್ಕಳಿಗೆ ಕೊಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ವಾರದ ಆರು ದಿನವೂ ಕೂಡ 1ನೇ ತರಗತಿಯಿಂದ 10ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆಗಳನ್ನು ಕೊಡುತ್ತಿದೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ವಿತರಿಸುತ್ತಿದೆ. ಆದರೆ ಇದುವರೆಗೂ ಒಂದು ಮೊಟ್ಟೆಗೆ ಸರ್ಕಾರ ₹6 ಮಾತ್ರ ಕೊಡುತ್ತಿದ್ದು, ಮೊಟ್ಟೆಯ ಬೆಲೆ ₹8 ಆಗಿದೆ. ಪ್ರತಿದಿನ ಒಂದು ಮೊಟ್ಟೆಗೆ ಹೆಚ್ಚುವರಿಯಾಗಿ ₹2 ರೂಪಾಯಿ ಆಯಾ ಶಾಲಾ ಮುಖ್ಯಗುರುಗಳೇ ಭರಿಸುತ್ತಿದ್ದಾರೆ. ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸರ್ಕಾರ ಮೊಟ್ಟೆಯ ಅನುದಾನ ಹೆಚ್ಚಿಸಿಲ್ಲ. ಇದರಿಂದಾಗಿ ಶಾಲಾ ಶಿಕ್ಷಕರು ತಮ್ಮ ಮೇಲಧಿಕಾರಿಗಳ ಎದುರು ನಿತ್ಯ ಗೋಳು ತೋಡಿಕೊಳ್ಳುತ್ತಿದ್ದಾರೆ.

ಕೆಲವುಕಡೆ ಮೊಟ್ಟೆ ಕಟ್:

ವಿಜಯಪುರ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ 1,944 ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 2,26,166 ಮಕ್ಕಳು ಓದುತ್ತಿದ್ದಾರೆ. ಅದರಂತೆ 344 ಅನುದಾನಿತ ಶಾಲೆಗಳಿದ್ದು, 76,391 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಸೇರಿ ಜಿಲ್ಲೆಯಲ್ಲಿ ಒಟ್ಟು 2,288 ಶಾಲೆಗಳು ಹಾಗೂ 3,02,557 ವಿದ್ಯಾರ್ಥಿಗಳು ಇದ್ದಾರೆ. ಇದರಲ್ಲಿ ಅರ್ಧಕರ್ಧ ಮಕ್ಕಳು ಮೊಟ್ಟೆ ಸೇವಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದ ಕಾರಣ ಬಹುತೇಕರಿಗೆ ಮೊಟ್ಟೆಗಳೇ ಸಿಗದಂತಾಗಿವೆ. ಮೊಟ್ಟೆಯ ಬೆಲೆ ಏರಿಕೆ ಆಗಿರುವುದರಿಂದ ಕೆಲವು ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹೆಚ್ಚುವರಿ ಹಣ ಕೊಟ್ಟು ಮೊಟ್ಟೆ ತರುವುದನ್ನೇ ಬಿಟ್ಟು ಎಲ್ಲ ಮಕ್ಕಳಿಗೂ ಬಾಳೆಹಣ್ಣು ಕೊಡುತ್ತಿದ್ದಾರೆ.

ಸರ್ಕಾರ ಮೊಟ್ಟೆಯ ದರ ಹೆಚ್ಚಿಸಲಿ:

ಬಡವರ ಮಕ್ಕಳಲ್ಲಿ ಶಕ್ತಿ ಹಾಗೂ ಯುಕ್ತಿ ಹೆಚ್ಚಾಗಲೆಂದು ಸರ್ಕಾರದಮೊಟ್ಟೆ ವಿತರಣೆ ಯೋಜನೆ ದರ ಹೆಚ್ಚಳದಿಂದ ಕೊಕ್ಕೆ ಬೀಳುವ ಹಂತಕ್ಕೆ ತಲುಪಿದೆ. ತಕ್ಷಣ ಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚೆತ್ತುಕೊಂಡು ಪ್ರತಿ ಮೊಟ್ಟೆಗೆ ₹8ಗೆ ಹೆಚ್ಚಿಸಿ ಆದೇಶಿಸುವ ಮೂಲಕ ಶಾಲಾ ಮಕ್ಕಳಿಗೆ ಮೊಟ್ಟೆ ಸಿಗುವ ಹಾಗೆ ಮಾಡಬೇಕಿದೆ.

ಸರ್ಕಾರ ಒಂದು ಮೊಟ್ಟೆಗೆ 6 ರೂ ಕೊಡುತ್ತಿದ್ದು, ಪ್ರಸ್ತುತ ಒಂದು ಮೊಟ್ಟೆಯ ಬೆಲೆ 8 ರೂ ಗೆ ಏರಿಕೆಯಾಗಿದೆ. ಆದರೂ ಮಕ್ಕಳಿಗೆ ಅನ್ಯಾಯವಾಬಾರದು ಎಂದು ನಮ್ಮ ಶಿಕ್ಷಕರು ಹೆಚ್ಚುವರಿ ಹಣ ಭರಿಸಿ ಶಾಲಾ ಮಕ್ಕಳಿಗೆ ಮೊಟ್ಟೆಗಳನ್ನು ಕೊಡುತ್ತಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪ್ರತಿ ಮೊಟ್ಟೆಗೆ 8 ರೂ ಮಂಜೂರಿಸಿ ಸರ್ಕಾರ ಆದಷ್ಟು ಬೇಗ ಆದೇಶಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಶಿಕ್ಷಕರು ಮೊಟ್ಟೆಯನ್ನೇ ನೀಡುವುದು ಬಿಡಬೇಕಾಗುತ್ತದೆ.

ಅರ್ಜುನ ಲಮಾಣಿ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರು

ಮೊಟ್ಟೆಯ ದರ ಹೆಚ್ಚಳವಾಗಿರುವ ಕುರಿತು ಸರ್ಕಾರಕ್ಕೆ ಪತ್ರದ ಮುಖೇನ ಗಮನಕ್ಕೆ ತರಲಾಗಿದೆ. ಶಾಲೆಗಳಲ್ಲಿ ಮೊಟ್ಟೆ ಸೇವಿಸುವ ಎಲ್ಲ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಮೊಟ್ಟೆಗಳನ್ನು ಕೊಡಬೇಕು ಎಂದು ಸೂಚಿಸಲಾಗಿದೆ. ಅವರು ಭರಿಸಿದ ಹೆಚ್ಚುವರಿ ಹಣವನ್ನು ಸರ್ಕಾರ ಆದೇಶಿಸಿದ ತಕ್ಷಣವೇ ಪಾವತಿಸಲಾಗುವುದು. ಇನ್ನೊಂದು ವಾರದಲ್ಲಿ ಸರ್ಕಾರದಿಂದ ಆದೇಶ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ.

.ಶಿವಚಂದ್ರ ಕತ್ನಳ್ಳಿ, ಶಿಕ್ಷಣಾಧಿಕಾರಿಗಳು, ಪಿಎಂಪಿ(ಅಕ್ಷರ ದಾಸೋಹ), ಜಿಲ್ಲಾ ಪಂಚಾಯತಿ