ಮರಳು ನಿಕ್ಷೇಪ ಜಂಟಿ ಪರಿಶೀಲನೆಗೆ ಸಚಿವ ಕೆ.ಜೆ. ಜಾರ್ಜ್‌ ಸೂಚನೆ

| Published : Jul 13 2024, 01:41 AM IST

ಮರಳು ನಿಕ್ಷೇಪ ಜಂಟಿ ಪರಿಶೀಲನೆಗೆ ಸಚಿವ ಕೆ.ಜೆ. ಜಾರ್ಜ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆಯೇ ?, ಈ ರೀತಿಯ ಸಂದೇಹ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವ್ಯಕ್ತವಾಯಿತು.

ಕಂದಾಯ, ಅರಣ್ಯ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲಿಸಬೇಕು । ಅಕ್ರಮ ಮರಳು ಸಾಗಾಣೆ ಸಂಶಯ । ತ್ರೈ ಮಾಸಿಕ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆಯೇ ?, ಈ ರೀತಿಯ ಸಂದೇಹ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವ್ಯಕ್ತವಾಯಿತು.

ಈ ಹಿನ್ನಲೆಯಲ್ಲಿ ಜಿಲ್ಲೆಯ ಮರಳು ನಿಕ್ಷೇಪಗಳನ್ನು ಕಂದಾಯ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಪರಿಶೀಲಿಸಲು ಸಚಿವರು ಸೂಚನೆ ನೀಡಿದರು. ಅನುಪಾಲನಾ ವರದಿ ಮೇಲೆ ಚರ್ಚೆ ನಡೆದ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ವಿಂದ್ಯಾ ಮಾಹಿತಿ ನೀಡಿ, ಜಿಲ್ಲೆಯಲ್ಲಿ 88 ಮರಳು ನಿಕ್ಷೇಪಗಳಿಗೆ ಮಂಜೂರಾತಿ ಕಾರ್ಯಾ ದೇಶ ನೀಡಲಾಗಿದ್ದು, ಅವುಗಳಲ್ಲಿ 51 ನಿಕ್ಷೇಪಗಳ ಅವಧಿ ಮುಕ್ತಾಯಗೊಂಡಿದೆ. 28 ಮರಳು ನಿಕ್ಷೇಪಗಳು ಮಾತ್ರ ರಾಜಧನ ಪಾವತಿಸಿ ಕಾರ್ಯಾರಂಭ ಮಾಡಿದ್ದು, 9 ನಿಕ್ಷೇಪಗಳು ಮಂಜೂರಾದ ದಿನಾಂಕದಿಂದ ನಿಷ್ಕ್ರೀಯ ವಾಗಿವೆ ಎಂದು ಹೇಳಿದರು.

ಆಗ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ಈ ಬಗ್ಗೆ ಸಂಶಯ ಇದೆ. ರಿನಿವಲ್‌ ಮಾಡಿಕೊಂಡಿಲ್ಲ ಎಂದರೆ ಜಿಲ್ಲೆ ಯಲ್ಲಿ ಮರಳಿಗೆ ಬೇಡಿಕೆ ಇಲ್ಲ ಎಂದರ್ಥ ಅಲ್ಲ. ಕಾಮಗಾರಿಗಳಿಗೆ ಮರಳಿನ ಅಗತ್ಯತೆ ತುಂಬಾ ಇದೆ. ಅಂತಹವರಿಗೆ ಹಳೆ ಪರ್ಮಿಟ್‌ ಮೇಲೆ ಮರಳು ಸಾಗಾಣಿಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದರು. ಅದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ. ಹಾಗಾಗಿ ಕಂದಾಯ, ಪೊಲೀಸ್‌ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸುವುದು ಸೂಕ್ತ ಎನ್ನುತ್ತಿದ್ದಂತೆ ಕೂಡಲೇ ಈ ಕೆಲಸ ಆಗಬೇಕೆಂದು ಸಚಿವರು ಸೂಚನೆ ನೀಡಿದರು.ತರೀಕೆರೆ ಶಾಸಕ ಜಿ.ಎಚ್‌. ಶ್ರೀನಿವಾಸ್‌ ಮಾತನಾಡಿ, ತರೀಕೆರೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇಂದಿಗೂ ಕೂಡ ಕುಡಿಯವ ನೀರಿನ ಸಮಸ್ಯೆ ಇದೆ ಎಂದು ಸಭೆ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಕುಡಿವ ನೀರಿನ 68 ಕಾಮಗಾರಿ ತೆಗೆದು ಕೊಳ್ಳಲಾಗಿದ್ದು, ಇವುಗಳಲ್ಲಿ 61 ಬೋರ್‌ವೆಲ್‌ಗಳು ಸಫಲ ವಾಗಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ವಿನಾಯಕ್ ಮಾಹಿತಿ ನೀಡಿದರು. ನೀರಿನ ಲಭ್ಯತೆ ನೋಡಿ ಬೋರ್‌ವೆಲ್‌ ಕೊರೆಸಬೇಕು. ಗುತ್ತಿಗೆದಾರರಿಗೆ ಕೆಲಸ ಕೊಡಲು ಯೋಜನೆ ಮಾಡಬಾರದು. ನೀರಿಲ್ಲದ ಕಡೆ ಕಾಮಗಾರಿ ಮಾಡಬೇಡಿ ಎಂದು ಸಿ.ಟಿ. ರವಿ ಸಲಹೆ ನೀಡಿದರು.

ಕೆಡಿಪಿ ನಾಮ ನಿರ್ದೇಶನ ಸದಸ್ಯ ರಂಗೇನಹಳ್ಳಿ ಸಿರಾಜ್‌ ಮಾತನಾಡಿ, ಬಾವಿಕೆರೆ ಮೊರಾರ್ಜಿ ವಸತಿ ಶಾಲೆ, ರಂಗೇನ ಹಳ್ಳಿ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದೆ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದಾಗ ಶಾಲೆಗಳ ಶೌಚಾಲಯ ಶುದ್ಧಿಗೊಳಿಸಲು ಪ್ರತ್ಯೇಕ ಸಿಬ್ಬಂದಿ ನೇಮಕವಾಗಿಲ್ಲ ಎಂದು ವಿಪ ಸದಸ್ಯ ಎಸ್‌.ಎಲ್‌. ಭೋಜೇಗೌಡ ಹೇಳಿದರು.

ಯಾವ ಶಾಲೆಯಲ್ಲಿ ಶೌಚಾಲಯ ಶುದ್ಧಿಕರಣ ಹಾಗೂ ಕುಡಿವ ನೀರಿನ ವ್ಯವಸ್ಥೆ ಸರಿಇಲ್ಲವೋ ಅಂತಹ ಶಾಲೆಗಳ ಪಟ್ಟಿ ಸಿದ್ಧಪಡಿಸಿ, ಅದಕ್ಕೆ ಬೇಕಾದ ಅನುದಾನ ತಾವು ಕೊಡುವುದಾಗಿ ಸಿ.ಟಿ. ರವಿ ಹೇಳಿದಾಗ ಬಾವಿಕೆರೆ ಮೊರಾರ್ಜಿ ವಸತಿ ಶಾಲೆಗೆ ಕಾಂಪೌಂಡ್‌ ನಿರ್ಮಿಸಲು ಅನುದಾನ ನೀಡಲು ಸಿರಾಜ್‌ ಅವರು ಸಿ.ಟಿ. ರವಿ ಹಾಗೂ ಎಸ್‌.ಎಲ್‌. ಭೋಜೇಗೌಡರಿಗೆ ಕೋರಿದರು.

ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಸರ್ವೆ ನಂ. 265 ರಲ್ಲಿರುವ ಮರಗಳ ತೆರವು ಕೆಲಸ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡುವ ಯಂತ್ರೋಪಕರಣ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಮಾಹಿತಿ ನೀಡಲು ಸಿ.ಟಿ. ರವಿ ಹೇಳಿದಾಗ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಮಾಹಿತಿ ನೀಡಿದರು. ಇದು, ಸಮಂಜಸ ವಿಲ್ಲ ಎಂದು ಸಿ.ಟಿ. ರವಿ ಹೇಳಿದಾಗ, ಯಂತ್ರೋಪಕರಣ ಪರಿಶೀಲನೆಗೆ ತಂಡ ರಚನೆ ಮಾಡಲಾಗುವುದು ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಉಪಸ್ಥಿತರಿದ್ದರು.

--- ಬಾಕ್ಸ್‌ ----ಎಂಎಲ್‌ಎ- ಎಂಎಲ್‌ಸಿ ನಡುವೆ ಗದ್ದಲಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ‌ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಜಿಪಂನಲ್ಲಿ ಶುಕ್ರವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ದೋಸ್ತಿ ವಿಧಾನಪರಿಷತ್‌ ಸದಸ್ಯರ ಹಾಗೂ ಆಡಳಿತ ಪಕ್ಷದ ಶಾಸಕರ ನಡುವೆ ಯಾರು ಎಲ್ಲಿ ಕುಳಿತು ಕೊಳ್ಳಬೇಕೆಂಬ ಗೊಂದಲದಿಂದ ಕೆಲಸ ಸಮಯ ಗದ್ದಲದ ವಾತಾವರಣ ಉಂಟಾಗಿತ್ತು.

ಉಸ್ತುವಾರಿ ಸಚಿವರು ಸಭೆಯಲ್ಲಿ ಆಸೀನರಾಗುತ್ತಿದ್ದಂತೆ ಶಾಸಕರು ವೇದಿಕೆ ಖುರ್ಚಿಯಲ್ಲಿ ಆಸೀನರಾದರು. ವಿಧಾನ ಪರಿಷತ್‌ನ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಸಹ ವೇದಿಕೆಯಲ್ಲಿದ್ದರು. ಈ ವೇಳೆ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹಾಗೂ ಎಸ್‌.ಎಲ್‌. ಭೋಜೇಗೌಡ ಒಳಗೆ ಬಂದು ಈ ಹಿಂದಿನ ಎಲ್ಲಾ ಸಭೆಗಳಲ್ಲಿ ಶಾಸಕರು ಕೆಳಗಿನ ಆಸನಗಳಲ್ಲಿ ಕುಳಿತು ಕೊಳ್ಳುವುದು ಸಂಪ್ರದಾಯ ಎಂದರು.

ಈ ವೇಳೆ ಕಡೂರು ಶಾಸಕ ಕೆ.ಎಸ್. ಆನಂದ್ ಶಾಸಕರ ಘನತೆ ಎತ್ತಿ ಹಿಡಿಯುವ ಉದ್ದೇಶದಿಂದ ಮೇಲೆ ಕುಳಿತು ಕೊಳ್ಳಬೇಕು. ವಿಧಾನ ಪರಿಷತ್ ಸದಸ್ಯರ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲ ಎನ್ನುತ್ತಿದ್ದಂತೆ ಸಿ.ಟಿ.ರವಿ ಮತ್ತು ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ವೇದಿಕೆ ಮೇಲೆ ಕುಳಿತುಕೊಳ್ಳಬೇಕೋ ಅಥವಾ ಕೆಳಗೆ ಕುಳಿತುಕೊಳ್ಳ ಬೇಕೋ ಎನ್ನುವ ವಿಚಾರ ಸಭೆಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದಿದೆ ಎಂದು ಸಿಇಒ ಸಭೆ ಗಮನಕ್ಕೆ ತರುತ್ತಿದ್ದಂತೆ ಸಿ.ಟಿ. ರವಿ ಹಾಗೂ ಎಸ್‌.ಎಲ್‌. ಭೋಜೇಗೌಡರು ಅಧಿಕಾರಿಗಳ ಸಾಲಿನಲ್ಲಿ ಕುಳಿತುಕೊಂಡರು.

ಮಧ್ಯ ಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್ ಈ ಗೊಂದಲಕ್ಕೆ ಸ್ಪಷ್ಟನೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸಲಾಗುವುದು ಎಂದರು.

ಗೊಂದಲದ ಸ್ಪಷ್ಟತೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸೋಣ ಈಗ ವೇದಿಕೆಗೆ ಬನ್ನಿ ಎಂದು ಜಾರ್ಜ್ ಮತ್ತೇ ಮನವಿ ಮಾಡಿದರು. ಇದಕ್ಕೆ ಸಿ.ಟಿ.ರವಿ ಮತ್ತು ಭೋಜೇಗೌಡ ಕೆಳಗಿನ ಆಸನದಲ್ಲೆ ಕುಳಿತು ಸಭೆಯಲ್ಲಿ ಪಾಲ್ಗೊಂಡರು.

12 ಕೆಸಿಕೆಎಂ 5ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯ ಶಾಸಕರು, ಅಧಿಕಾರಿಗಳು ಇದ್ದರು.

---

12 ಕೆಸಿಕೆಎಂ 6ಕೆಡಿಪಿ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಹಾಗೂ ಡಾ. ಧನಂಜಯ ಸರ್ಜಿ ಅವರು ಅಧಿಕಾರಿಗಳೊಂದಿಗೆ ಕೆಳಗಿನ ಆಸನದಲ್ಲಿ ಕುಳಿತುಕೊಂಡಿದ್ದರು.