ಬತ್ತಕ್ಕೆ ₹2920 ನೀಡಿ ಖರೀದಿಸಿ, ವಂಚನೆ ತಡೆಗೆ ಕ್ರಮ ಕೈಗೊಳ್ಳಿ

| Published : Nov 16 2024, 12:37 AM IST

ಸಾರಾಂಶ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಸ್ಥಾಪಿಸಿ, ಪ್ರೋತ್ಸಾಹಧನ ಸೇರಿಸಿ, ಪ್ರತಿ ಕ್ವಿಂಟಲ್‌ಗೆ ₹2920 ದರದಂತೆ ಬತ್ತ ಖರೀದಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರೈತ ಒಕ್ಕೂಟ ಮುಖಂಡರ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

- ಜಿಲ್ಲಾಡಳಿತಕ್ಕೆ ರೈತ ಒಕ್ಕೂಟ ಮುಖಂಡರ ನಿಯೋಗ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಸ್ಥಾಪಿಸಿ, ಪ್ರೋತ್ಸಾಹಧನ ಸೇರಿಸಿ, ಪ್ರತಿ ಕ್ವಿಂಟಲ್‌ಗೆ ₹2920 ದರದಂತೆ ಬತ್ತ ಖರೀದಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರೈತ ಒಕ್ಕೂಟ ಮುಖಂಡರ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಒಕ್ಕೂಟದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳವನೂರು ಬಿ.ನಾಗೇಶ್ವರ ರಾವ್‌, ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ ಕುಂದುವಾಡ, ಪಾಲಿಕೆ ಮಾಜಿ ಸದಸ್ಯ ಎಚ್.ಎನ್. ಶಿವಕುಮಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

ಬಿ.ಎಂ.ಸತೀಶ ಮಾತನಾಡಿ, ಜಿಲ್ಲೆಯಲ್ಲಿ 4.5 ಲಕ್ಷ ಮೆಟ್ರಿಕ್ ಟನ್ ಬತ್ತ ಉತ್ಪಾದನೆ ನಿರೀಕ್ಷೆ ಇದೆ. ಕ್ವಿಂ.ಗೆ ₹2500ರಿಂದ ₹2650 ವರೆಗೆ ಬತ್ತ ಧಾರಣೆ ಇದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ಬತ್ತ ಖರೀದಿಸಬೇಕು. ಜಿಲ್ಲೆಯಲ್ಲಿ ತಕ್ಷಣ ಬತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕನಿಷ್ಠ ಬೆಂಬಲ ಬೆಲೆಯಡಿ ಕ್ವಿಂ.ಗೆ 2320 ದರ ನಿಗದಿಯಾಗಿದೆ. ಇದು ರೈತನ ಶ್ರಮಕ್ಕೆ ತಕ್ಕುದಾಗಿಲ್ಲ. ಬಿಜೆಪಿ ಸರ್ಕಾರದಂತೆ ಕಾಂಗ್ರೆಸ್ ಸರ್ಕಾರವೂ ಕ್ವಿಂ.ಗೆ ₹600 ಪ್ರೋತ್ಸಾಹಧನ ಘೋಷಿಸಿ, ಬತ್ತ ಖರೀದಿಸಲಿ ಎಂದು ಆಗ್ರಹಿಸಿದರು.

ಖರೀದಿ ಕೇಂದ್ರಕ್ಕೆ ಧಾನ್ಯ ಸಾಗಣೆ, ಹಮಾಲಿ ವೆಚ್ಚ ಎಲ್ಲಕ್ಕೂ ರೈತರ ಶೋಷಿಸುತ್ತಿದ್ದಾರೆ. ಈ ಹಿನ್ನೆಲೆ ರೈತರ ಹೊಲದಿಂದ ಖರೀದಿ ಕೇಂದ್ರಕ್ಕೆ, ಗೋದಾಮಿಗೆ ಸರ್ಕಾರವೇ ನೇರ ಬತ್ತ ಸಾಗಣೆ ಮಾಡಬೇಕು. ಆ ಮೂಲಕ ಹಣದ ದುರುಪಯೋಗ ತಡೆಯಬೇಕು. ಎಪಿಎಂಸಿಯ ಪ್ರತಿ ಮಂಡಿಯಲ್ಲಿ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ಮಾಡದೇ, ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಬಿ.ಎಂ.ಸತೀಶ ದೂರಿದರು.

ಜಿಲ್ಲಾಧಿಕಾರಿಗೆ ಮನವಿ ಅರ್ಪಿಸುವ ಸಂದರ್ಭ ರೈತ ಮುಖಂಡರಾದ ವಿಜಯಕುಮಾರ, ಕಬ್ಬೂರು ಶಿವಕುಮಾರ, ಕುಂದುವಾಡ ಪುನೀತ್, ಮಹೇಶಪ್ಪ, ಜಿಮ್ಮಿ ಹನುಮಂತಪ್ಪ ಇತರರು ಇದ್ದರು.

- - - ಬಾಕ್ಸ್‌

* ಬತ್ತ ಖರೀದಿಗೆ ಟಾಸ್ಕ್ ಫೋರ್ಸ್‌ ಸಭೆ

ಜಿಲ್ಲೆಯಲ್ಲಿ ತಕ್ಷಣವೇ ಟಾಸ್ಕ್ ಫೋರ್ಸ್‌ ಸಮಿತಿ ಸಭೆ ಕರೆದು, ಬತ್ತ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಮಂಡಿಯಲ್ಲಿ ಪ್ರತಿ ಧಾನ್ಯ ರಾಶಿ ಟೆಂಡರ್ ಮೂಲಕ ಖರೀದಿ ನಡಸುವಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ದಲಾಲಿ, ತೂಕದಲ್ಲಿ ವಂಚನೆ, ತಳಗಾಳು ಪಡೆಯುವುದು ನಿಯಮ ಬಾಹಿರ. ಇವುಗಳನ್ನೂ ಸೂಕ್ತ ರೀತಿಯಲ್ಲಿ ನಿಯಂತ್ರಿಸಲಾಗುವುದು ಎಂದು ಡಿಸಿ ಗಂಗಾಧರ ಸ್ವಾಮಿ ರೈತರ ನಿಯೋಗಕ್ಕೆ ಭರವಸೆ ನೀಡಿದರು.

- - - -15ಕೆಡಿವಿಜಿ4, 5:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ರೈತ ಒಕ್ಕೂಟ ಮುಖಂಡರ ನಿಯೋಗದಿಂದ ಮನವಿ ಸಲ್ಲಿಸಲಾಯಿತು.