ಸಾರಾಂಶ
ಸಂವಿಧಾನದ ದಿನದ ಅಂಗವಾಗಿ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ 2024ರ ನ.26ರಂದು ಆಯೋಜಿಸಿದ್ದ ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿಲ್ಲ ಎಂಬ ಆರೋಪದ ಮೇಲೆ ಪರಿಷತ್ತಿನ ಉಪ ಕಾರ್ಯದರ್ಶಿ ಕೆ.ಜೆ.ಜಲಜಾಕ್ಷಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂವಿಧಾನದ ದಿನದ ಅಂಗವಾಗಿ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ 2024ರ ನ.26ರಂದು ಆಯೋಜಿಸಿದ್ದ ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿಲ್ಲ ಎಂಬ ಆರೋಪದ ಮೇಲೆ ಪರಿಷತ್ತಿನ ಉಪ ಕಾರ್ಯದರ್ಶಿ ಕೆ.ಜೆ.ಜಲಜಾಕ್ಷಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.ತಮ್ಮನ್ನು ಸೇವೆಯಿಂದ ಅಮಾನತುಗೊಳಿಸಿ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಕೆ.ಜೆ.ಜಲಜಾಕ್ಷಿ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರ ಪೀಠ, ಮೇಲ್ನೋಟಕ್ಕೆ ಜಲಜಾ ಅವರ ಅಮಾನತಿಗೆ ಬಲವಾದ ಸಾಕ್ಷ್ಯಾಧಾರಗಳು ಕಾಣುತ್ತಿಲ್ಲ. ಜಲಜಾ ಅವರು ತಪ್ಪೆಸಗಿರುವ ವಿಚಾರ ಇಲಾಖಾ ವಿಚಾರಣೆಯಿಂದ ಹೊರಬರಬೇಕಿದೆ ಎಂದು ತಿಳಿಸಿ, ಅರ್ಜಿದಾರರ ಅಮಾನತು ಆದೇಶವನ್ನು ರದ್ದುಪಡಿಸಿದೆ.
ವಿಚಾರಣೆ ವೇಳೆ ಜಲಜಾ ಅವರ ಪರ ವಕೀಲರು, ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಅಂಬೇಡ್ಕರ್ ಅವರ ಫೋಟೋ ಇರಿಸುವ ಬಗ್ಗೆ ನಿರ್ದಿಷ್ಟವಾಗಿ ಹೇಳಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆ, ಕರ್ತವ್ಯ ಲೋಪ ಆಗಿರುವ ಬಗ್ಗೆ ನೀಡಲಾಗಿದ್ದ ನೋಟಿಸ್‌ಗೆ ಅರ್ಜಿದಾರರು ಉತ್ತರಿಸಿ, ತಾನು ಕಾರ್ಯಕ್ರಮದ ಆಯೋಜಕಿ ಅಲ್ಲ, ನಾನು ಹೊಣೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಭಾಪತಿಯವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಿದ್ದರು. ಆದರೆ, ಕೆಲವು ಸಂಘಟನೆಗಳು ದೂರು ನೀಡಿ ಒತ್ತಡ ತಂದ ಹಿನ್ನೆಲೆಯಲ್ಲಿ ಜಲಜಾ ಅವರನ್ನು ಅಮಾನತುಗೊಳಿಸಲಾಗಿದೆ. ಒಂದು ವರ್ಷದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಅದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಆದ್ದರಿಂದ, ಅಮಾನತು ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.ರಾಜ್ಯ ಸರ್ಕಾರದ ಪರ ವಕೀಲರು, ಸಂವಿಧಾನ ದಿನದಂದು ಶಿಷ್ಟಾಚಾರ ಪಾಲಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ಪಾಲಿಸದಕ್ಕೆ ಜಲಜಾ ಅವರನ್ನು ಅಮಾನತು ಮಾಡಲಾಗಿದೆ ಎಂದು ವಾದಿಸಿದ್ದರು.